ಸರಕಾರಧ ಮಾರ್ಗಸೂಚಿ ಪ್ರಕಾರ ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನರು ಗೊಂದಲಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.
ಅವರು ಶನಿವಾರ ಜಿಲ್ಲಾ ಪಂಚಾಯತ್ ಸಬಾಂಗಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ಎದುರಿಸಲು ಜಿಲ್ಲಾಡಳಿತ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿದೆ. ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಲಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ಸೂಕ್ತ ಬೆಡ್ ವ್ಯವಸ್ಥೆ, ಆಕ್ಸಿಜನ್ ಲಭ್ಯತೆಯನ್ನು ಕಾತ್ರಿಪಡಿಸಲು ಸೂಚಿಸಲಾಗಿದೆ. ಮುಂಜಾಗರೂಕತಾ ಕ್ರಮವಾಗಿ ಜನರು ಗುಂಪು ಸೇರುವುದನ್ನು ತಪ್ಪಿಸಲು ವಾರಾಂತ್ಯ ಕರ್ಫ್ಯೂವ್ ವಿಧಿಸಲಾಗಿದ್ದು ಜನರು ಭಯಪಡುವ ಅಗತ್ಯ ಇಲ್ಲ ಎಂದರು.
ಟಾಸ್ಕ್ ಫೋರ್ಸ್ :
ಗ್ರಾಮೀಣ ಮಟ್ಟದಲ್ಲಿ ಈಗಾಗಲೇ ರಚಿಸಲಾಗಿರುವ ಟಾಸ್ಕ್ ಫೋರ್ಸ್ ಮತ್ತೆ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಅದರಲ್ಲಿರುವ ಅಧಿಕಾರಿಗಳು ಸಕ್ರಿಯವಾಗಿ ಸಭೆಗಳಲ್ಲಿ ಬಾಗವಹಿಸುದು ಸೇರಿದಂತೆ ಕರ್ತವ್ಯ ನಿರ್ವಹಿಸಬೇಕು. ಈ ಕುರಿತು ಯಾವುದೇ ದೂರುಗಳು ಬರಬಾರದು ಎಂದರು.
ಲಸಿಕೆ ಅಭಿಯಾನ: ೬೦ ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆಗೆ ಜನವರಿ ೧೦ರಿಂದ ಜಿಲ್ಲೆಯಾದ್ಯಂತ ಚಾಲನೆ ನೀಡಲಾಗುವುದು. ಈಗಾಗಲೇ ಎರಡನೇ ಡೋಸ್ ಪಡೆದು ೯೦ ದಿನ ಕಳೆದಿರುವವರು ಬೂಸ್ಟರ್ ಡೋಸ್ ಪಡೆಯಬಹುದಾಗಿದೆ. ಬೂಸ್ಟರ್ ಡೋಸ್ ಪಡೆಯಲು ಜಿಲ್ಲೆಯಲ್ಲಿ ಒಟ್ಟು ೨ಲಕ್ಷ ಫಲಾನುಭವಿಗಳಿದ್ದರೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ನೀಡಲು ವ್ಯವಸ್ಥೆ ಮಾಡಲಾಗುವುದು. ಇದೇ ರೀತಿ ಈಗಾಗಲೇ ೧೫-೧೮ ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯ ನಡೆಯುತ್ತಿದ್ದು, ಡಿಸೇಂಬೆರ್ ೧೨ರ ಒಳಗಾಗಿ ಎಲ್ಲಾ ೮೩,೮೩೧ ಮಂದಿಗೆ ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಮಾತನಾಡಿ, ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ೧೩೮೨ ಬೆಡ್ ಗಳು ಲಭ್ಯವಿದ್ದು, ೬೪೦ ಬೆಡ್ ಗಳನ್ನೂ ಕೋವಿಡಿಗಾಗಿ ಮೀಸಲಿರಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೯೪ ಸಾವಿರ ಕಿಲೋ ಲೀಟರ್ ಆಕ್ಸಿಜನ್ ಸಂಗ್ರಹಣಾ ಸಾಮರ್ಥ್ಯದ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸಮರ್ಪಕ ನಿರ್ವಹಣೆಗೆ ವಾರ್ ರೂಮ್ ಆರಂಭಿಸಲಾಗಿದ್ದು, ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಾಧಿಕಾರಿಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಜ್ಜುಗೊಳಿಸಲಾಗಿದೆ. ನರ್ಸ್ ಗಳ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೯೭.೬೭ ಶೇ. ಜನರು ಪ್ರಥಮ ಡೋಸ್ ಪಡೆದಿದ್ದು, ೮೦ ಶೇ ಜನರು ಎರಡನೇ ಡೋಸ್ ಪಡೆದಿದ್ದಾರೆ ಎಂದರು.
ಶಾಸಕರಾದ ಅಶೋಕ್ ನಾಯ್ಕ್, ರುದ್ರೇಗೌಡ, ಡಿ. ಎಸ್. ಅರುಣ್, ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಎಂ.ಎಲ್. ವೈಶಾಲಿ, ಎಸ್.ಪಿ. ಲಕ್ಷ್ಮೀ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.