ರಿಪ್ಪನಪೇಟೆ ನ್ಯೂಸ್…
ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಕೆದಲುಗುಡ್ಡ ಗ್ರಾಮದಲ್ಲಿ ನೂತನ ಸರಕಾರಿ ಐಟಿಐ ಕಾಲೇಜು ಕಟ್ಟಡ ಸಂಪೂರ್ಣವಾಗಿ ನಿರ್ಮಾಣವಾಗಿದ್ದು, ಉದ್ಘಾಟನೆ ಭಾಗ್ಯ ಕಾಣದೆ ಐಟಿಐ ವಿದ್ಯಾರ್ಥಿಗಳು ಪರಿತಪಿಸುತಿದ್ದಾರೆ, ಆದಷ್ಟು ಬೇಗ ನೂತನ ಕಟ್ಟಡ ಉದ್ಘಾಟನೆ ಮಾಡಿ ಐಟಿಐ ವಿದ್ಯಾರ್ಥಿಗಳಿಗೆ ಅನುಕೂಲಕರ ಮಾಡಿಕೊಡುವಂತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಿ ಪಿ ರಾಮಚಂದ್ರ ಆಗ್ರಹಿಸಿದ್ದಾರೆ.
ಇಂದು ಕೆದಲುಗುಡ್ಡೆ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಐಟಿಐ ಕಾಲೇಜಿನ ಕಟ್ಟಡವನ್ನು ವೀಕ್ಷಿಸಿ ನಂತರ ಮಾತನಾಡಿದ ಅವರು ಕಾಗೋಡು ತಿಮ್ಮಪ್ಪ ರವರ ಅವಧಿಯಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭಗೊಂಡಿದ್ದ ಸರ್ಕಾರಿ ಐಟಿಐ ಕಾಲೇಜ್ ಕಟ್ಟಡ ಈಗ ಸಂಪೂರ್ಣವಾಗಿ ನಿರ್ಮಾಣಗೊಂಡಿದ್ದರೂ ಸಹ ಉದ್ಘಾಟನೆ ಭಾಗ್ಯ ಕಾಣದೆ ಕೋಟ್ಯಾಂತರ ರೂಪಾಯಿ ವೆಚ್ಚದ ಉಪಕರಣಗಳು ದೊಡ್ಡಿನಕೊಪ್ಪದಲ್ಲಿ ಇರುವ ಹಳೆಯ ಬಿಲ್ಡಿಂಗ್ ನಲ್ಲಿ ತುಕ್ಕು ಹಿಡಿಯುತ್ತಿದೆ.ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲಕರವಾಗಬೇಕಾಗಿದ್ದ ಈ ಸರ್ಕಾರಿ ಐಟಿಐ ಕಾಲೇಜು ವಿದ್ಯಾರ್ಥಿಗಳ ಬಳಕೆಗೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ನೂತನ ಕಟ್ಟಡ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು.
ಸರ್ಕಾರಿ ಸವಲತ್ತುಗಳನ್ನು ಸದ್ಬಳಕೆ ಆಗಬೇಕು.ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ವಾತಾವರಣವನ್ನು ಜನಪ್ರತಿನಿಧಿಗಳು ನಿರ್ಮಿಸಿಕೊಡಬೇಕು.ಐಟಿಐ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ಅತಿಮುಖ್ಯ ಅದು ಈ ಹೊಸ ಕಟ್ಟಡದಲ್ಲಿ ಲಭ್ಯವಿದೆ. ಜನಪ್ರತಿನಿಧಿಗಳು ಕೂಡಲೇ ಇತ್ತ ಗಮನಹರಿಸಿ ನೂತನ ಕಟ್ಟಡ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ರಿಪ್ಪನ್ ಪೇಟೆ ಘಟಕದ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್, ಗ್ರಾಪಂ ಸದಸ್ಯರಾದ ಚಂದ್ರೇಶ್ ಎನ್ ,ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಅಮೀರ್ ಹಂಜಾ ಹಾಗೂ ಇನ್ನಿತರರ ಮುಖಂಡರು ಉಪಸ್ಥಿತರಿದ್ದರು.