ಭದ್ರಾವತಿ ನ್ಯೂಸ್…
ಭದ್ರಾವತಿ ಜ.15: ಉದ್ಯೋಗ ಖಾತ್ರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅತಿಥಿ ಉಪನ್ಯಾಸಕರು ಕಳೆದೊಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದರು. ಈಗ ಅವರಿಗೆ ಸರ್ಕಾರ ಆದೇಶವೊಂದನ್ನು ಹೊರಡಿಸಿ ಅತಿಥಿ ಉಪನ್ಯಾಸಕರಿಗೆ ಸಂಕ್ರಾತಿ ಸಿಹಿ ನೀಡುತ್ತಿದ್ದೇವೆ ಎಂದು ತಿಳಿಸಿದೆ. ಮೇಲ್ನೊಟಕ್ಕೆ ಇದು ಸಿಹಿ ಸುದ್ದಿ ಎಂದು ಕಂಡು ಬಂದರೂ ಅತಿಥಿ ಉಪನ್ಯಾಸಕರ ಪಾಲಿಕೆ ಕಹಿ ಸುದ್ದಿಯೇ ಆಗಿದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯಥಿ ಹಾಗು ಭದ್ರಾವತಿ ಗ್ರಾಮಾಂತರ ಕಾಂಗ್ರೆಸ ಹಿಂದುಳಿದ ವಿಭಾಗದ ಅಧ್ಯಕ್ಷರಾದ ಎಂ.ರಮೇಶ್ ಶಂಕರಘಟ್ಟ ಅಭಿಪ್ರಾಯಪಟ್ಟಿದ್ದಾರೆ.
ಗೌರವಧನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ. ಆದರೆ ಕಾರ್ಯಭಾರದ ಅವಧಿಯನ್ನು ಹೆಚ್ಚಳ ಮಾಡಿರುವುದರಿಂದ ಈಗಿರುವ ಬಹುಪಾಲು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಸದ್ಯ ಜಾರಿಯಲ್ಲಿರುವ 8 ರಿಂದ 10 ಗಂಟೆಗಳ ಕಾರ್ಯಭಾರವನ್ನು ಗರಿಷ್ಟ 15 ಗಂಟೆಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಸುಮಾರು ಅರ್ಧದಷ್ಟು ಉಪನ್ಯಾಸಕರು ಕಾರ್ಯಭಾರವಿಲ್ಲದೆ ಕೆಲಸ ಕಳೆದುಕೊಳ್ಳಲ್ಲಿದ್ದಾರೆ.
15 ಗಂಟೆಗಳ ಕಾರ್ಯಭಾರ ಲಭ್ಯವಿಲ್ಲದೇ ಇದ್ದರೆ, ಅಂಥ ಅತಿಥಿ ಉಪನ್ಯಾಸಕರನ್ನು ಕಾರ್ಯಭಾರವಿರುವ ಇತರೆ ಸರಕಾರಿ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸಲು ಶಿವಮೊಗ್ಗದವರನ್ನು ಗುಲ್ಬರ್ಗಕ್ಕೂ ಅಥವಾ ಬೀದರ್‍ಗೆ ವರ್ಗಾವಣೆಗೊಳಿಸಿದರೆ ಅತಿಥಿ ಉಪನ್ಯಾಸಕರೆ ಕೆಲಸ ಬಿಡುವಂತಹ ಸ್ಥಿತಿ ಉದ್ಭವವಾಗುತ್ತದೆ.
ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಸೇವಾ ಭದ್ರತೆಯ ಬಗ್ಗೆ ಯಾವುದೇ ಖಾತರಿ ನೀಡಿರುವುದಿಲ್ಲ. ಕಳೆದ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರುಗಳನ್ನು ಯಾರೊಬ್ಬರನ್ನು ಕರ್ತವ್ಯದಿಂದ ತೆಗೆದು ಹಾಕದೇ ಸೇವಾ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಪರಿಷ್ಕøತ ಆದೇಶ ಹೊರಡಿಸಬೇಕಾಗಿದೆ ಎಂದು ರಮೇಶ್ ರವರು ಒತ್ತಾಯಿಸಿದ್ದಾರೆ.