ಶಿವಮೊಗ್ಗ : ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಹಲವು ವರ್ಷಗಳ ನಂತರವೂ ಭಾಷೆಯ ಬಗೆಗಿನ ಅಧ್ಯಯನ ಮತ್ತು ಬೆಳವಣಿಗೆಗೆ ಮತ್ತಷ್ಟು ಪೂರಕ ಶಕ್ತಿ ದೊರೆಯಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಅಭಿಪ್ರಾಯಪಟ್ಟರು.
ಮಂಗಳವಾರ ನಗರದ ವಿನೋಬಾನಗರ ಪ್ರಸನ್ನಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ 196 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಕನ್ನಡಗರಿಗೆ ಪ್ರಾದೇಶಿಕವಾಗಿ ಉದ್ಯೋಗವಕಾಶ ದೊರೆಯಬೇಕಿದೆ. ಇಂದಿನ ದಿನಮಾನದಲ್ಲಿ ಭಾಷೆಯ ಬಗೆಗಿನ ಅಭಿಮಾನದಲ್ಲಿ ಕೊರತೆ ಎದ್ದು ಕಾಣುತ್ತಿದೆ . ಹೊಸ ಶಿಕ್ಷಣ ನೀತಿಯ ಮೂಲಕ ನಮ್ಮ ಪ್ರಾದೇಶಿಕ ಭಾಷೆಯನ್ನು ಪರಿಣಾಮಕಾರಿಯಾಗಿ ಅಧ್ಯಯನ ನಡೆಸಲು ಪೂರಕವಾಗಿತ್ತು.
ಅದರೇ ಕನ್ನಡದಲ್ಲಿ ಅಧ್ಯಯನದ ಬೇಕು ಬೇಡಗಳ ಕುರಿತಾಗಿ ಚರ್ಚೆ ನಡೆಯುತ್ತಿರುವುದು ವಿಷಾದನೀಯ. ಕನ್ನಡ ಭಾಷೆಯ ಬೆಳವಣಿಗೆಗೆ ಮತ್ತಷ್ಟು ಶಕ್ತಿಯನ್ನು ನೀಡುವ ಜವಾಬ್ದಾರಿ ಸರ್ಕಾರದ ಮೇಲಿದೆ.
ಕೊರೊನಾದ ಆತಂಕದ ನಡುವೆ ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳನ್ನು ಅರಳಿಸುವ ಕಾರ್ಯ ಸಾಹಿತ್ಯ ಹುಣ್ಣಿಮೆ ಮೂಲಕ ನಿರಂತರವಾಗಿ ನಡೆಯುತ್ತಿದೆ. ಸಾಂಸ್ಕೃತಿಕತೆಯ ಜೊತೆಗೆ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಿದೆ. ಈ ಹಿನ್ನಲೆಯಲ್ಲಿ ಸಾಮಾಜಿಕ ಜವಾಬ್ದಾರಿಯಿಂದ ನಾವು ಮುನ್ನಡೆಯೋಣ. ಸಾಂಸ್ಕೃತಿಕ ರಾಯಭಾರಿಗಳಾಗಿ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡುಗೆ ನೀಡಬೇಕಿದೆ. ಹಾಗಾಗಿಯೇ ಕವಿಗಳು ಕವನಗಳ ಮೂಲಕ ಲೇಖಕರು ತಮ್ಮ ಬರಹದ ಮೂಲಕ ಸದಾ ಜಾಗೃತಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಉಪಾಧ್ಯಕ್ಷರಾದ ಭಾರತಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾದ ಎಸ್.ವಿ.ಚಂದ್ರಕಲಾ, ಕವಿಗಳಾದ ಟಿ.ಎಸ್.ರಮಾನಂದ ಮಾತನಾಡಿದರು. ಆರ್. ರತ್ನಯ್ಯ ಕಥಾ ವಾಚನ ಮಾಡಿದರು. ಕವಿತಾ ಸುಧೀಂದ್ರ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಆಶಾದೇವಿ.ಬಿ.ಎಸ್, ಪರಿಮಳ ರಾಮಚಂದ್ರ, ಕಾತ್ಯಾಯಿನಿ ಕವನ ವಾಚನ ಮಾಡಿದರು. ಗಾಯಕರಾದ ರಮಾ.ಪಿ.ಶೆಟ್ಟಿ, ಸುಶೀಲಾ ಷಣ್ಮುಗಂ, ಲೀಲಾವತಿ ಮತ್ತು ತಂಡ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಪಿ.ಕೆ.ಸತೀಶ್ ಸ್ವಾಗತಿಸಿ, ಡಿ.ಗಣೇಶ್ ನಿರೂಪಿಸಿದರು.