ಶಿವಮೊಗ್ಗ: ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ ಸ್ಪೋಟ ನಡೆದು ಒಂದು ವರ್ಷ ಕಳೆದರೂ ಹಾನಿಗೊಳಗಾದ ಮನೆಗಳ ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ನವಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹುಣಸೋಡು ಬಳಿ 2021 ರ ಜನವರಿ 21 ರ ರಾತ್ರಿ 10.20 ರ ಸುಮಾರಿಗೆ ಕಲ್ಲು ಕ್ವಾರಿಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದುಗಳು ಸ್ಪೋಟಗೊಂಡು 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸ್ಪೋಟದಿಂದಾಗಿ ಶಿವಮೊಗ್ಗ ಜಿಲ್ಲೆ ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲೂ ಸಹ ಭೂಕಂಪನದ ಅನುಭವವಾಗಿತ್ತು ಎಂದರು.ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಗ್ರಾಮಗಳಾದ ಗೆಜ್ಜೇನಹಳ್ಳಿ, ಹನುಮಂತ ನಗರ, ಹುಣಸೋಡು, ಅಬ್ಬಲಗೆರೆ, ಬಸವನಗಂಗೂರು, ಚನ್ನಮುಂಬಾಪುರ, ಬೊಮ್ಮನಕಟ್ಟೆ, ಕಲ್ಲಗಂಗೂರು ಸೇರಿದಂತೆ ಅನೇಕ ಗ್ರಾಮಗಳ ಮನೆಗಳ ಗೋಡೆಗಳು ಬಿರುಕುಬಿಟ್ಟಿದ್ದು, ಕೆಲವು ಮನೆಗಳ ಮೇಲ್ಛಾವಣಿ, ಟಿವಿ, ಎಲೆಕ್ಟ್ರಾನಿಕ್ ಉಪಕರಣ ಹಾನಿಗೊಳಗಾಗಿದ್ದವು. ಅನೇಕ ಗ್ರಾಮಸ್ಥರ ಕಿವಿ ತಮಟೆ ಹಾಳಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಗಣಿ ಮತತ್ಉ ಭೂವಿಜ್ಞಾನ ಇಲಾಖೆ ನಿರ್ಲಕ್ಷ್ಯದಿಂದ ತಮ್ಮದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ ಎಂದರು.
ಸುಮಾರು 850 ಸಂತ್ರಸ್ಥರು ಪ್ರತ್ಯಕ್ಷವಾಗಿ ಸ್ಪೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದು, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದಿಂದ ಸರಿಯಾಗಿ ಸ್ಥಳ ಪರಿಶೀಲನೆ ನಡೆಸದೇ ಕಚೇರಿಯಲ್ಲೇ ಕುಳಿತು ಪ್ರತಿ ಮನೆಯೂ ಶೇಕಡ 10 ರಷ್ಟು ಹಾನಿಯಾಗಿದೆ ಎಂದು ವರದಿ ನೀಡಿದ್ದಾರೆ ಎಂದು ದೂರಿದರು.ಜಿಲ್ಲಾಡಳಿತ ನ್ಯಾಯಾಲಯಕ್ಕೆ ಪ್ರಕರಣದ ಆರೋಪಪಟ್ಟಿ ಸಲ್ಲಿಸುವವರೆಗೂ ಸಂತ್ರಸ್ಥರಿಗೆ ಪರಿಶೀಲಿಸಿ ಪರಿಹಾರ ನೀಡುವ ಭರವಸೆ ನೀಡುತ್ತಾ ನಾಟಕವಾಡಿ ನ್ಯಾಯಾಲಯಕ್ಕೆ ಅಪೂರ್ಣ ಹಾಗೂ ದುರ್ಬಲ ಆರೋಪಪಟ್ಟಿ ಸಲ್ಲಿಸಿ ಈಗ ನಮಗೂ ಸಂತ್ರಸ್ಥರಿಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.ಈ ಹಿಂದಿನ ಜಿಲ್ಲಾಧಿಕಾರಿಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರಕರಣದಿಂದ ಯಾವುದೇ ಮನೆಗಳು ಹಾನಿಯಾಗಿಲ್ಲ ಎಂಬ ನಾಚಿಕೆಗೇಡಿನ ಹೇಳಿಕೆ ನೀಡಿದ್ದರು. ಜಿಲ್ಲಾ ಉಸ್ತುವಾರಿ ಕೆ.ಎಸ್. ಈಶ್ವರಪ್ಪ ಅವರು ಜಿಲ್ಲಾಧಿಕಾರಿಗೆ ಹೇಳಿ ಸಂತ್ರಸ್ಥರ ಸಭೆ ಕರೆಯುವುದಾಗಿ ಭರವಸೆ ನೀಡಿ ಈಗ ನನ್ನಿಂದ ಪರಿಹಾರ ಕೊಡಿಸಲು ಸಾಧ್ಯವಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ.
ಹಾಗೂ ಕ್ರಷರ್ ಮತ್ತು ಕ್ವಾರೆ ಮಾಲೀಕರ ಪರವಾಗಿ ಕ್ರಷರ್ ಹಾಗೂ ಕ್ವಾರೆಗಳನ್ನು ಪುನಃ ಆರಂಭಿಸಲು ನೇರವಾಗಿ, ಪರೋಕ್ಷವಾಗಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ತಮ್ಮ ಕ್ಷೇತ್ರದಲ್ಲಿ ಸಂತ್ರಸ್ಥರಿಗಾಗಿರುವ ತೊಂದರೆಗೆ ಪರಿಹಾರ ಕೊಡಿಸುವ ಬದಲು ಸಂತ್ರಸ್ಥರು ನೀವು ಏಕೆ ಹೋರಾಟ ನಡೆಸುತ್ತೀರಾ ಎಂದು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು. ಸ್ಪೋಟದಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಕೊಡಿಸಬೇಕು. ಹುಣಸೋಡು ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಕ್ರಷರ್ ಹಾಗೂ ಕ್ವಾರೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿ ಆ ಭಾಗದಿಂದ ಎತ್ತಂಗಡಿ ಮಾಡಿಸಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ಪರಿಹಾರ ನೀಡದಿದ್ದರೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಶವಯಾತ್ರೆ ಮಾಡುವುದರ ಮೂಲಕ ಪ್ರತಿಭಟನೆ ನಡೆಸಲಾಗುವುದು. ಸೂಕ್ತ ಕಾನೂನು ಹೋರಾಟ ಕೂಡ ನಡೆಸಲಾಗುವುದು ಎಂದು ಎಚ್ಚರಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಿಂಗರಾಜ್, ಸಂತೋಷ್, ದೇವೆಂದ್ರಪ್ಪ, ಕುಮಾರ್, ಆಸೀಫ್, ರಾಜಮ್ಮ, ನಯನಾ ಮೊದಲಾದವರಿದ್ದರು.