ಶಿವಮೊಗ್ಗ: ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕನಾಯ್ಕ್ ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಎನ್.ಎಸ್.ಯು.ಐ. ಶಿವಮೊಗ್ಗ ನಗರ ಶಾಖೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕೋವಿಡ್ ತಾಂಡವವಾಡುತ್ತಿದ್ದು, ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದರೂ, ಶಾಸಕಕೆ.ಬಿ. ಅಶೋಕನಾಯ್ಕ್ ಅವರು ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.ನಿನ್ನೆ ಶಾಸಕರ ಒಡೆತನದ ಸವಳಂಗ ರಸ್ತೆಯಲ್ಲಿರುವ ಅಕ್ಷರ ಶಿಕ್ಷಣ ಸಂಸ್ಥೆಯಲ್ಲಿ ಶಾಸಕರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದರೂ, ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡು ಕುಣಿದು ಕುಪ್ಪಳಿಸಿದ್ದಾರೆ ಎಂದು ದೂರಿದರು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ವ್ಯಾಪಕವಾಗಿ ಹರಡುತ್ತಿದ್ದು, ಕೋವಿಡ್ ಮೂರನೇ ಅಲೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನುವುದು ತಿಳಿದಿದ್ದರೂ, ತಮ್ಮ ಜವಾಬ್ದಾರಿ ಮರೆತು ಶಾಸಕರೇ ಕೋವಿಡ್ ನಿಯಮಾವಳಿ ಉಲ್ಲಂಘಿಸಿ, ವಿದ್ಯಾರ್ಥಿಗಳನ್ನು ಒಟ್ಟಿಗೇ ಸೇರಿಸಿ ಕೋವಿಡ್ ಹರಡಲು ನೇರ ಕಾರಣವಾಗಿರುವುದು ಅಕ್ಷಮ್ಯ ಅಪರಾಧವಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಕೂಡಲೇ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಲ್ಲದೇ ಮಕ್ಕಳ ಆರೋಗ್ಯ ಲೆಕ್ಕಸಿದೇ ಅವರನ್ನು ದುರ್ಬಳಕೆ ಮಾಡಿಕೊಂಡಿರುವ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕೈಗೊಳ್ಳಲು ಆದೇಶಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಎನ್.ಎಸ್.ಯು.ಐ. ಶಾಸಕ ಅಶೋಕನಾಯ್ಕ್ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಮುಂದುವರೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ. ನಗರಾಧ್ಯಕ್ಷ ಎಸ್.ಎನ್. ವಿಜಯಕುಮಾರ್, ಜಿ. ರವಿಕುಮಾರ್, ಚಂದ್ರೋಜಿರಾವ್, ವಿಕ್ರಂ, ಸುಹಾಸ್ ಸಾಗರ್, ಯುವ ಕಾಂಗ್ರೆಸ್ ಮುಖಂಡರಾದ ಮಧುಸೂದನ್, ಕೆ. ಚೇತನ್, ಅಬ್ದುಲ್, ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಘುನಾಯ್ಕ್, ಯುವ ಕಾಂಗ್ರೆಸ್ ಅಧ್ಯಕ್ಷ ಮಲಿಕ್ ಇನ್ನಿತರರು ಭಾಗವಹಿಸಿದ್ದರು