ಶಿವಮೊಗ್ಗ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಗಣ ರಾಜ್ಯೋತ್ಸವ ಆಚರಣೆ ವೇಳೆ ನ್ಯಾಯಾಧೀಶರೊಬ್ಬರು ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ ಘಟನೆ ಅತ್ಯಂತ ಖಂಡನಾರ್ಹವಾಗಿದ್ದು, ಭಾರತದ ಸಂವಿಧಾನ ರಕ್ಷಣೆ ಮತ್ತು ನ್ಯಾಯ ಕೊಡುವ ಸ್ಥಾನಗಳಲ್ಲಿ ಜಾತಿ ವಾದಿ ಮತ್ತು ಸಂವಿಧಾನ ವಿರೋಧಿ ನ್ಯಾಯಾಧೀಶರಿರುವುದು ಆತಂಕ ಸೃಷ್ಠಿಸಿದೆ. ಮತ್ತು ನ್ಯಾಯಾಲಯದ ಮೇಲೆ ಅಪನಂಬಿಕೆ ಉಂಟು ಮಾಡಿದೆ. ಈ ಘಟನೆ ಹಿನ್ನಲೆಯಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಧೀಶರ ವರ್ತನೆ ವಿರೋಧಿಸಿ ಸಾಮೂಹಿಕವಾಗಿ ಧರಣಿ, ಪ್ರತಿಭಟನೆಗಳು ನಡೆಯುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.
ಆದ್ದರಿಂದ ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರ ವಿರುದ್ಧ ಕಠಿಣ ಕಾನೂನುಕ್ರಮ ಜರುಗಿಸಬೇಕೆಂದು ಸಮಿತಿ ಆಗ್ರಹಿಸಿದೆ.ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕರಾದ ಟಿ.ಹೆಚ್. ಹಾಲೇಶಪ್ಪ, ಪ್ರಮುಖರಾದ ಮಂಜುನಾಥ್, ಎಂ.ಆರ್. ಶಿವಕುಮಾರ್, ಶೇಷಪ್ಪ, ಜಗ್ಗು ತೂದೂರು ಪರಮೇಶ್, ತ್ಯಾಜ್ಯವಳ್ಳಿ ಚಂದ್ರು ಮೊದಲಾದವರಿದ್ದರು.