ಶಿವಮೊಗ್ಗ: ತ್ಯಾವರ ಚಟ್ನಹಳ್ಳಿ ಸರ್ವೇ ನಂ. 93 ರಲ್ಲಿ ಕಳೆದ ಎರಡು ವರ್ಷಗಳಿಂದ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಪರಿಶಿಷ್ಟ ಜಾತಿ/ಪಂಗಡದ ಸುಮಾರು 50 ಕುಟುಂಬಗಳನ್ನು ನಿನ್ನೆ ರಾತ್ರಿ ಏಕಾಏಕಿ ಪೊಲೀಸರು ದೌರ್ಜನ್ಯ ನಡೆಸಿ ತೆರವುಗೊಳಿಸಿದ್ದಾರೆ.ಮಹಿಳೆಯರು, ಮಕ್ಕಳು ಎನ್ನದೇ ದೌರ್ಜನ ನಡೆಸಿದ್ದಾರೆ.

ನಮಗೆ ಯಾವುದೇ ವಸತಿ ಸೌಲಭ್ಯವಿರುವುದಿಲ್ಲ. ಹಲವಾರು ವರ್ಷಗಳಿಂದ ಶ್ರೀರಾಂಪುರದಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿದ್ದೆವು. ಅದು ಖಾಸಗಿ ಜಾಗವಾಗಿದ್ದ ಕಾರಣ ಅಲ್ಲಿಂದ ನಮ್ಮನ್ನು ತೆರವುಗೊಳಿಸಲಾಗಿತ್ತು. ಬಳಿಕ ತ್ಯಾವರ ಚಟ್ನಹಳ್ಳಿಯಲ್ಲಿ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದು, ನಮಗೆ ಹಕ್ಕು ಪತ್ರ ನೀಡಬೇಕೆಂದು ಹಲವು ಬಾರಿ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ಆದರೆ, ನಮಗೆ ಸರ್ಕಾರ ಇದುವರೆಗೆ ಯಾವುದೇ ವಸತಿ ಸೌಲಭ್ಯ ನೀಡಿರುವುದಿಲ್ಲ ಎಂದು ದೂರಿದರು.

ಈಗ ಈ ಸರ್ವೇ ನಂಬರ್ ನಲ್ಲಿ ಸರ್ಕಾರಿ ನೌಕರರು ನಿವೇಶನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಈ ಹಿನ್ನಲೆಯಲ್ಲಿ ಸಂಘದ ಕುಮ್ಮಕ್ಕಿನಿಂದ ನಮಗೆ ಅಲ್ಲಿಂದಲೂ ಒಕ್ಕಲೆಬ್ಬಸಿದ್ದಾರೆ. ಜಿಲ್ಲಾಧಿಕಾರಿಗಳು ಬಂದು ನ್ಯಾಯ ಒದಗಿಸುವವರೆಗೆ ನಾವು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಸರ್ಕಾರಿ ನೌಕರರ ಸಂಘದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸುಂದರೇಶ್ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರಾದ ಜಿ.ಡಿ. ಮಂಜುನಾಥ್, ಜಗದೀಶ್, ಮಂಜುನಾಥ್, ಮಾರ್ಟಿಸ್  ಹಾಗೂ ಸಂತ್ರಸ್ತರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…