ಶಿವಮೊಗ್ಗ: ಎಲ್ಲಾ ರಾಜ್ಯಗಳ ಪೊಲೀಸ್ ವ್ಯಸವ್ಥೆಯನ್ನು ಭಾರತೀಯ ಭೂಸೇನೆ, ವಾಯುಸೇನೆ, ನೌಕಾ ಸೇನೆ ರೀತಿ ಕೇಂದ್ರ ಸರ್ಕಾರದ ವ್ಯಾಪ್ತಿಗೊಳಪಡಿಸಬೇಕೆಂದು ಜನತಾ ದಳ(ಸಂಯುಕ್ತ) ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್. ಗೌಡ ಅವರು ಗಾಂಧಿ ಪಾರ್ಕ್ ನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.

ದೇಶದೊಳಗೆ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪೊಲೀಸ್ ಪಡೆಗಳನ್ನು ರಾಜ್ಯ ಸರ್ಕಾರದ ಅಧೀನದಿಂದ ಕೇಂದ್ರ ಸರ್ಕಾರದ ಅಧೀನಕ್ಕೊಳಪಡಿಸಿದರೆ ದೇಶದೊಳಗೆ ನಡೆಯುತ್ತಿರುವ ಅಕ್ರಮಗಳು, ಭ್ರಷ್ಟಾಚಾರ, ಕೊಲೆ, ಸುಲಿಗೆ, ಅತ್ಯಾಚಾರ, ಕಿಡ್ನಾಪ್, ಸ್ಮಗ್ಲಿಂಗ್, ಕಳ್ಳತನ, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮತ್ತು ಮಾನವ ಕಳ್ಳಸಾಗಾಣಿಕೆ, ಹೈಟೆಕ್ ವೇಶ್ಯಾವಾಟಿಕೆ, ಗ್ಯಾಂಬ್ಲಿಂಗ್ ದಂಧೆ, ರೌಡಿಸಂ, ರಿಯಲ್ ಎಸ್ಟೇಟ್ ಮಾಫಿಯಾ, ನಕಲಿ ನೋಟ್ ಹಾವಳಿ, ಆನ್ ಲೈನ್ ದೋಖಾ ಹವಾಲಾ ದಂಧೆ, ಕಪ್ಪು ಹಣ ದಂಧೆ, ಕೋಮು ಸೌಹಾರ್ದತೆ ಹಾಳು ಮಾಡಿ ಕೋಮುಬಲಭೆ ಸೃಷ್ಠಿ ಮಾಡಿ ದೇಶದಲ್ಲಿ ಶಾಂತಿ ಕದಡುವಂತಹ ಸಂಚು ಕೋರರು ಹಾಗೂ ಚೈನ್ ಲಿಂಕ್ ದೋಖಾ, ಸುಪಾರಿ ಕಿಲ್ಲರ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಯನ್ನು ಕೇಂದ್ರ ಸುಪರ್ದಿಗೆ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್, ಲ್ಯಾಂಡ್ ಮಾಫಿಯಾ, ಮೆಡಿಕಲ್ ಮಾಫಿಯಾ ಹಾಗೂ ಮುಂತಾದ ದಂಧೆಗಳಿಗೆ ಆಯಾ ರಾಜ್ಯದಲ್ಲಿರುವ ಕೆಲವು ಪ್ರಭಾವಿ ರಾಜಕಾರಣಿಗಳ ಅಧಿಕಾರದಲ್ಲಿರುವ ಹಾಗೂ ಬಂಡವಾಳಶಾಹಿಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾದರೆ ಪ್ರಭಾವಿ ಭ್ರಷ್ಟ ರಾಜಕಾರಣಿಗಳ ಹಸ್ತಕ್ಷೇಪದಿಂದ ಕಾನೂನು ರೀತಿ ಏನೂ ಮಾಡಲಾಗದೇ ಅಸಹಾಯಕ ಸ್ಥಿತಿಯಲ್ಲಿ ಪೊಲೀಸರ ಪರಿಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ಬಾರಿ ಪೊಲೀಸರು ತಪ್ಪಿತಸ್ಥರ, ಭ್ರಷ್ಟ ರಾಜಕಾರಣಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಕಾರ್ಯೋನ್ಮುಖರಾದರೆ ಅಂತಹ ಪೊಲೀಸರಿಗೆ ಸಸ್ಪೆಂಡ್, ಡಿಸ್ ಮಿಸ್ ಮಾಡಿ ಅಥವಾ ವರ್ಗಾವಣೆ ಮಾಡಿ ಪೊಲೀಸರ ಆತ್ಮವಿಶ್ವಾಸ ಹಾಗೂ ನೈತಿಕ ಸ್ಥೈರ್ಯ ಕುಂದಿಸುವಂತಹ ಕೆಲಸಗಳು ನಡೆಯಿತ್ತಿವೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಪ್ರಾಮಾಣಿಕ ಪೊಲೀಸರ ವಿರುದ್ದ ಇಂತಹ ನೈತಿಕ ಸ್ಥೈರ್ಯ ಕುಂದಿಸುವಂತಹ ಘಟನೆಗಳು ನಡೆಯುತ್ತಾ ಬಂದಿವೆ. ಆದ್ದರಿಂದ ದೇಶದಲ್ಲಿರುವ ಎಲ್ಲಾ ರಾಜ್ಯಗಳ ಪೊಲೀಸ್ ಪಡೆಗಳನ್ನು ಕೇಂದ್ರದ ವ್ಯಾಪ್ತಿಗೆ ತಂದರೆ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಬಹುದು. ಎಲ್ಲಾ ಪೊಲೀಸರಿಗೂ ಎಲ್ಲಾ ಪೊಲೀಸರಿಗೂ ಏಕರೂಪದ ಸಮವಸ್ತ್ರ, ಏಕರೂಪದ ಭತ್ಯೆ, ವರ್ಗಾವಣೆ, ಬಡ್ತಿ ಮೊದಲಾದವು ಒಂದೇ ರೀತಿ ಇದ್ದಾಗ ಪೊಲೀಸರು ಆತ್ಮವಿಶ್ವಾಸದಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಕೇಂದ್ರ ಸರ್ಕಾರ ಪೊಲೀಸರ ಪಡೆಗಳನ್ನು ಕೇಂದ್ರ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಗಿದೆ. 

ವರದಿ ಮಂಜುನಾಥ್ ಶೆಟ್ಟಿ…