ಶಿವಮೊಗ್ಗ : ಸತ್ಯ ಅಹಿಂಸೆ ಸರಳತೆಯ ನಡುವೆ ತನ್ನನ್ನು ತಾನು ಕಂಡುಕೊಂಡವರು ಮಹಾತ್ಮ ಗಾಂಧೀಜಿಯವರು ಎಂದು ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟರು.

ಕಾಲೇಜಿನ ಆವರಣದಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣತೆತ್ತ ಹುತಾತ್ಮರ ಸ್ಮರಣಾರ್ಥ ಮೌನಾಚರಣೆ ಹಾಗೂ ಐಕ್ಯತಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಶಕ್ತಿ ನೀಡಿದವರು ಗಾಂಧೀಜಿ. ದಂಡಿಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ ಚಳವಳಿಯಂತಹ ಅನೇಕ ಹೋರಾಟಗಳು ಇತಿಹಾಸದ ಎಂದೆಂದಿಗೂ ಮರೆಯಲಾಗದ ಪುಟಗಳಲ್ಲಿ ಸೇರಿಕೊಂಡಿವೆ. ಅಹಿಂಸೆಯ ಹಾದಿಯಲ್ಲಿ ಕ್ರಮಿಸಿ ಸದಾ ಭಾರತೀಯರ ಮನದಲ್ಲಿ ಹಚ್ಚ ಹಸಿರಾಗಿದೆ.

ಬ್ರಿಟೀಷರು ತಮ್ಮ ವಿರುದ್ಧ ಹೋರಾಟ ನಡೆಸುವವರನ್ನು ಶಿಕ್ಷಿಸಲು ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಸೆಲ್ಯುಲಾರ್ ಜೈಲುಗಳನ್ನು ನಿರ್ಮಿಸಿದ್ದರು. ಘನಘೋರವಾದ ಶಿಕ್ಷೆಗಳನ್ನು ಚಳುವಳಿಗಾರರಿಗೆ ನೀಡಲಾಗುತ್ತಿತ್ತು. ಅಂತಹ ಯಾವುದೇ ಕಠಿಣತೆಗೆ ಎದೆಗುಂದದೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಹೋರಾಟವನ್ನು ನಡೆಸಿದ್ದಾರೆ. ಅಂತಹ ತ್ಯಾಗ ಬಲಿದಾನಗಳನ್ನು ಭಾರತೀಯರಾದ ನಾವು ಎಂದೆಂದಿಗೂ ಸ್ಮರಿಸೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆ.ಎನ್.ಎನ್.ಸಿ.ಇ ಶೈಕ್ಷಣಿಕ ಡೀನ್ ಡಾ.ಪಿ‌.ಮಂಜುನಾಥ, ದೈಹಿಕ ಶಿಕ್ಷಣ ನಿರ್ದೇಶಕರಾದ ಚೇತನ್, ದಿವ್ಯ.ಎಸ್.ಪಿ, ಪಿ.ಆರ್.ಓ ನೃಪತುಂಗ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…