ಶಿವಮೊಗ್ಗ: ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದ ಅಂಗವಾಗಿ ಏ.24 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಈ ಬಗ್ಗೆ ಪ್ರಧಾನ ಮಂತ್ರಿ ಕಾರ್ಯಾಲಯದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.

ತಾಲೂಕಿನ ಕೊಮ್ಮನಾಳ್ ಅಥವಾ ಹೊಳಲೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡುವ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಲಿದೆ. ಕಳೆದ ವಾರದ ಅಂತ್ಯದವರೆಗೂ ಕೊಮ್ಮನಾಳ್ ಗ್ರಾಪಂ ಮೇಲೆ ಹೆಚ್ಚಿನ ಗಮನಹರಿಸಲಾಗಿತ್ತು. ಆದರೆ ಇದೀಗ ಹೊಳಲೂರು ಗ್ರಾಪಂನ್ನು ಆಯ್ಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಜಿಲ್ಲಾಡಳಿತ ಬಂದಹಾಗೆ ಕಾಣುತ್ತಿದೆ.ಕೊಮ್ಮನಾಳು ಗ್ರಾಪಂಗೆ ಸವಳಂಗ ರಸ್ತೆ ಮೂಲಕ ಕ್ರಮಿಸಬೇಕಿದ್ದು, ಇಲ್ಲಿ ರೈಲ್ವೆ ಓವರ್ ಬ್ರಿಡ್ಜ್ ನ್ನೂ ಸಹ ಕ್ರಮಿಸ ಹೋಗಬೇಕಾದ ಕಾರಣ ಈ ಗ್ರಾಮ ಪಂಚಾಯಿತಿಗೆ ತಲಪುವುದು ಕಷ್ಟವಿದೆ.ಶಿವಮೊಗ್ಗ ಹೆಲಿಪ್ಯಾಡ್ಗೆ ಆಗಮಿಸುವ ಪ್ರಧಾನಿ ಸವಳಂಗ ರಸ್ತೆಯಲ್ಲಿ ಸಾಗಲು ರೈಲ್ವೆ ಮೇಲ್ಸೇತುವೆ ಕಾಮಗಾರಿ ಅಡ್ಡಿಯಾಗಿದೆ. ಈ ಕಾರಣದಿಂದ ಕೊಮ್ಮನಾಳ್ ಗ್ರಾಪಂ ಭೇಟಿ ಕಷ್ಟ ಸಾಧ್ಯ.

ಹಾಗಾಗಿ ಹೊನ್ನಾಳಿ ರಸ್ತೆಯಲ್ಲಿರುವ ಹೊಳಲೂರು ಗ್ರಾಪಂ ಮಾದರಿಯಾಗಿ ಗುರುತಿಸಿಕೊಂಡಿದೆ.ಸುಮಾರು ಎರಡು ವರ್ಷಗಳ ಹಿಂದೆಯೇ ಇಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಧಾನಿ ಭೇಟಿಗೆ ಯಾವುದೇ ತೊಡಕು ಎದುರಾಗುವುದಿಲ್ಲ. ಹೀಗಾಗಿ ಅಂತಿಮ ಹಂತದಲ್ಲಿ ಪ್ರಧಾನಿ ಭೇಟಿಗೆ ಹೊಳಲೂರು ಆಯ್ಕೆಯಾಗುವ ಸಂಭವ ಹೆಚ್ಚು.ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿರುವ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮುಂತಾದ ಮೂಲ ಸೌಕರ್ಯಗಳು ಪರಿಪೂರ್ಣವಾಗಿರುವಂತೆ ನೋಡಿಕೊಳ್ಳುವುದು, ಕೇಂದ್ರ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದು, ಆಯುಷ್ಮಾನ್ ಕಾರ್ಡ್, ಕೃಷಿ ಸಮ್ಮಾನ್ ಮುಂತಾದ ಯೋಜನೆಗಳಲ್ಲಿ ಶೇ.100 ಪ್ರಗತಿ ಸಾಧಿಸುವಂತೆ ನೋಡಿಕೊಳ್ಳುವುದು ಜಿಲ್ಲಾಡಳಿತಕ್ಕೆ ಸವಾಲುಗಳಾಗಿವೆ.

2018 ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಏಪ್ರಿಲ್ 24 ರಂದು ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ

ವರದಿ ಮಂಜುನಾಥ್ ಶೆಟ್ಟಿ…