ಶಿವಮೊಗ್ಗ : ನಮ್ಮ ದೇಶದ ಅಮೂಲ್ಯ ರತ್ನಗಳಾಗಿರುವ ಯುವ ಸಮೂಹ ರಸ್ತೆ ಸುರಕ್ಷತಾ ಕ್ರಮಗಳನ್ನು ಜವಬ್ದಾರಿಯುತವಾಗಿ ಪಾಲಿಸಬೇಕಿದೆ ಎಂದು ಶಿವಮೊಗ್ಗ ನಗರ ಟ್ರಾಫಿಕ್ ಪೋಲಿಸ್ ಇನ್ಸ್ಪೆಕ್ಟರ್ ಹೆಚ್.ಎಂ. ಸಿದ್ದನ್ ಗೌಡ ಹೇಳಿದರು.

ಗುರುವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ರಸ್ತೆ ಸಂಚಾರ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ರಸ್ತೆಯಲ್ಲಿ ವಾಹನಗಳನ್ನು ಚಲಾಯಿಸುವಾಗ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಯಾವುದೇ ಅಪಘಾತಗಳಲ್ಲಿ ಮೊದಲು ಗಾಯವಾಗುವುದು ತಲೆಗೆ. ಹಾಗಾಗಿಯೇ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಬಳಕೆಯನ್ನು ಕಡ್ಡಾಯವಾಗಿ ರೂಡಿಸಿಕೊಳ್ಳಿ. ವಾಹನಗಳನ್ನು ಮೋಜಿಗಾಗಿ ಬಳಸುವುದು ಬೇಡ. ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ತಮ್ಮದೇ ಆದ ಕುಟುಂಬ ವರ್ಗವಿರುತ್ತದೆ. ವಾಹನ ಚಾಲನೆಯ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳು ನೆನಪಿನಲ್ಲಿರಲಿ.

ಆಧುನಿಕ ತಂತ್ರಜ್ಞಾನಗಳ ಮೂಲಕ ಶಿವಮೊಗ್ಗ ನಗರದಾದ್ಯಂತ ಸ್ವಯಂಚಾಲಿತ ವಾಹನಗಳ ಸಂಖ್ಯಾ ಫಲಕಗಳ ಪತ್ತೆಕಾರಕ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು ವಾಹನ ಸಂಚಾರ ಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಪೂರಕ ಶಕ್ತಿ ದೊರೆತಂತಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‌ಸಿವಿಲ್‌ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಸ್.ಕಾರ್ತಿಕ , ಟ್ರಾಫಿಕ್ ಪೋಲಿಸರಾದ ಶ್ರೀನಿವಾಸ, ನಾಗರಾಜ, ಮಂಜುನಾಥ ಪಾಟೀಲ್, ಸಹ ಪ್ರಾದ್ಯಾಪಕರಾದ ಅಕ್ಷತಾ.ಎಂ, ಅರುಣ್.ವಿ, ಅನಿರುದ್ದ.ಎನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…