ಶಿವಮೊಗ್ಗ: ಭುಗಿಲೆದ್ದ ಹಿಜಾಬ್, ಕೇಸರಿ ಶಾಲು ಸಂಘರ್ಷ ಇಂದು ಶಿವಮೊಗ್ಗದ ವಿವಿಧ ಕಾಲೇಜುಗಳಿಗೆ ವ್ಯಾಪಸಿದ್ದರಿಂದ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ನಗರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಇಂದು ಬೆಳಿಗ್ಗೆ ನಗರದ ಪ್ರಮುಖ ಕಾಲೇಜುಗಳ ಆವರಣದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರೂ ಬಾಪೂಜಿನಗರ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂದಿನಂತೆ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದಾಗ ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶಿಸಲು ಯತ್ನಿಸಿದರು.ಈ ಸಂದರ್ಭದಲ್ಲಿ ಪ್ರಾಂಶುಪಾಲರು ಮತ್ತು ಪೊಲೀಸರು ಅವರಿಗೆ ಮನವೊಲಿಸುವ ಪ್ರಯತ್ನ ನಡೆಸಿದರು. ಕೇಸರಿ ಶಾಲು ತೆಗೆದು ತರಗತಿಗೆ ಹಾಜರಾಗುವಂತೆ ತಾಕೀತು ಮಾಡಿದರು. ಇದನ್ನು ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸಿದರು. ಕೆಲ ವಿದ್ಯಾರ್ಥಿಗಳು ವಾಪಾಸ್ ತೆರಳಿದರು.ನಂತರ ವಿವಾದ ಇತರೆ ಕಾಲೇಜುಗಳಿಗೂ ವ್ಯಾಪಿಸಿತು. ಸೈನ್ಸ್ ಮೈದಾನದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಒಂದು ಗುಂಪಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಕೇಸರಿ ಶಾಲು ಧರಿಸಿ ಕಾಲೇಜು ಆವರಣದಲ್ಲಿ ಪ್ರತಿಭಟನೆಯಲ್ಲಿ ತೊಡಗಿದರು. ಇದಕ್ಕೆ ಪ್ರತಿಯಾಗಿ ಇನ್ನೊಂದು ಗುಂಪಿನ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ‘ಹಿಜಾಬ್ ನಮ್ಮ ಹಕ್ಕು, ಅದನ್ನು ಧರಿಸಿಯೇ ಪಾಠ ಕೇಳುತ್ತೇವೆ’ ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ಡಿಡಿಪಿಯು ಆಗಮಿಸಿ ವಸ್ತ್ರಸಂಹಿತೆ ಬಗ್ಗೆ ತಿಳಿ ಹೇಳಿ, ಈ ವಾರದಲ್ಲೇ ಪರೀಕ್ಷೆಗಳು ಇರುವುದರಿಂದ ಎಲ್ಲರೂ ಹಿಜಾಬ್ ಮತ್ತು ಕೇಸರಿ ಶಾಲು ತೆಗೆದು ಕಾಲೇಜಿನ ತರಗತಿಗಳಿಗೆ ಹಾಜರಾಗಬೇಕೆಂದು ಹೇಳಿದರೂ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಡಲಿಲ್ಲ.ಬಳಿಕ ಕೇಸರಿ ಧ್ವಜಗಳನ್ನು ಹಿಡಿದು ಜೈಶ್ರೀರಾಮ್ ಘೋಷಣೆ ಕೂಗುತ್ತಾ ಒಂದು ಬಣ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೊರಟಿತು. ಈ ಸಂದರ್ಭದಲ್ಲಿ ಮತ್ತೊಂದು ಗುಂಪಿನ ವಿದ್ಯಾರ್ಥಿನಿಯರು ಕೂಡ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳುತ್ತಿದ್ದಾಗ ಸಂಘರ್ಷವಾಗದಂತೆ ಪೊಲೀಸರ ತಡೆ ಹಿಡಿದರು. ಒಂದು ಬಣದಿಂದ ಕಲ್ಲು ತೂರಾಟ ಕೂಡಾ ನಡೆಯಿತು. ಈ ವೇಳೆ ಪರಿಸ್ಥಿತಿ ಉದ್ವಿಗ್ನವಾಗದಂತೆ ತಡೆಯಲು ಪೊಲೀಸರು ಅನಿವಾರ್ಯವಾಗಿ ಲಘು ಲಾಠಿಪ್ರಹಾರ ಮಾಡಿದರು.

ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿಗಳನ್ನು ಕರೆಸಲಾಯಿತು.ಇನ್ನೊಂದೆಡೆ ಶಂಕರಮಠ ಸರ್ಕಲ್ ನಿಂದ ಅಮೀರ್ ಅಹ್ಮದ್ ವೃತ್ತ, ಬಿ.ಹೆಚ್. ರಸ್ತೆಯಿಂದ ಮಹಾವೀರ ವೃತ್ತದ ವರೆಗೆ ಸಂಚಾರ ಬಂದ್ ಮಾಡಲಾಗಿದೆ. ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಒಂದು ಕೋಮಿನ ವಿದ್ಯಾರ್ಥಿಗಳು ಡಿವಿಎಸ್ ಸರ್ಕಲ್ ನಿಂದ ಒಟ್ಟುಗೂಡಿ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿ ವಾಪಾಸ್ ಬಂದರೂ ಮತ್ತೊಂದು ಕೋಮಿನ ವಿದ್ಯಾರ್ಥಿಗಳು ಈ ವೇಳೆ ಎದುರಾಗಿದ್ದು, ಪೊಲೀಸರು ಅವರನ್ನು ತಡೆದರು. ಡಿವಿಎಸ್ ಸರ್ಕಲ್ ನಲ್ಲಿ ಹಿಜಾಬ್ ಪರವಾಗಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಸ್ಥಳದಿಂದ ತೆರಳುವಂತೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರೂ ಅವರು ಪ್ರತಿಭಟನೆ ಮುಂದುವರೆಸಿದರು.

ನಗರದಲ್ಲಿ ಮುನ್ನೆಚ್ಚರಿಕೆ ಪರವಾಗಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪ್ರಮುಖ ವೃತ್ತಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.ಬಾಕ್ಸ್:ನಗರದಾದ್ಯಂತ 2 ದಿನಗಳ ಕಾಲ 144 ಸೆಕ್ಷನ್ ಜಾರಿಶಿವಮೊಗ್ಗದ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ಬಗ್ಗೆ ನಡೆಯುತ್ತಿರುವ ವಿವಾದದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಾದ್ಯಂತ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಫೆ.8 ಮತ್ತು 9ರಂದು ಎರಡು ದಿನಗಳ ಕಾಲ ಕಲಂ 144 ಸಿಆರ್ ಪಿಸಿ ರಿತ್ಯಾ ನಿಷೇಧಾಜ್ಞೆ ಜಾರಿಗೊಳಿ ತಹಶೀಲ್ದಾರ್ ನಾಗರಾಜ್ ಆದೇಶ ಹೊರಡಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…