
ಶಿವಮೊಗ್ಗ: ಹಿಜಾಬ್, ಕೇಸರಿ ಶಾಲು ಗಲಾಟೆಯಿಂದ ಮುಚ್ಚಿದ್ದ ಶಾಲೆಗಳು ಇಂದು ಪುನಾರಂಭವಾಗಿವೆ. ಹೈಕೋರ್ಟ್ ಮಧ್ಯಂತರ ಆದೇಶದಂತೆ ಸಮವಸ್ತ್ರ ಧರಿಸಲು ಮಾತ್ರ ಅವಕಾಶ ಇದೆ. ಇಂದಿನಿಂದ ಪ್ರೌಢಶಾಲೆ ಆರಂಭವಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳು ಪುನಾರಂಭ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಿಪ್ರಸಾದ್ ಅವರು ಮೀನಾಕ್ಷಿ ಭವನ ಬಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಗೆ ಭೇಟಿ ನೀಡಿದ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಶಿಕ್ಷಕರಿಂದ ಮಾಹಿತಿ ಪಡೆದರು. ಶಾಲೆಗಳ ಭೇಟಿ ಬಳಿಕ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಮಾತನಾಡಿ, ಇಂದಿನಿಂದ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಬರುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಅಧಿಕಾರಿಗಳ ಸಭೆ ನಡೆಸಿ, ಈಗಾಗಲೇ ಸೂಚನೆ ಸಹ ನೀಡಿದ್ದೇನೆ ಎಂದರು.ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಮಾತನಾಡಿ, ಶಾಲೆಗಳು ಇಂದಿನಿಂದ ಪುನಾರಂಭವಾಗಿವೆ. ಸೂಕ್ಷ್ಮ ಶಾಲೆಗಳ ಸುತ್ತ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.ತಾರಕಕ್ಕರೇರಿದ ಹಿಜಾಬ್ ವಿವಾದ:ನಗರದಲ್ಲಿ ಹಿಜಾಬ್ ವಿಚಾರ ತಾರಕಕ್ಕೇರಿದ್ದು, ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು. ಪರೀಕ್ಷೆಯನ್ನೇ ಬಹಿಷ್ಕರಿಸಿದ್ದಾರೆ.

ಇಂದು ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆಯನ್ನು ಹಮ್ಮಿಕೊಂಡಿದ್ದು, ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ 13 ವಿದ್ಯಾರ್ಥಿನಿಯರು ಬಹಿಷ್ಕರಿಸಿದ್ದಾರೆ. ಶಿವಮೊಗ್ಗದ ಮೇನ್ ಮಿಡ್ಲ್ ಸ್ಕೂಲ್ ನಲ್ಲಿ ಎಸ್.ಎಸ್.ಎಲ್.ಸಿ. ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದು, ಪರೀಕ್ಷೆ ಬಹಿಷ್ಕರಿಸಿದ 13 ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.