ಶಿವಮೊಗ್ಗ: ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುತ್ತಿರುವ ಕಾರ್ಯಕರ್ತರನ್ನು ಗುರುತಿಸುವ ವ್ಯವಸ್ಥೆ ಕಾಂಗ್ರೆಸ್ನಲ್ಲಿ ಬರಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕರೆ ನೀಡಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,  ‘ಪಕ್ಷದ ಏಳಿಗೆಗಾಗಿ ಶ್ರಮಿಸುವಂತಹ ಕಾರ್ಯಕರ್ತನ್ನು ಗುರುತಿಸಿ ಅವರನ್ನು ಪಕ್ಷದ ಮುಖ್ಯ ವೇದಿಕೆಗೆ ತರುವುದರಿಂದ ಪಕ್ಷದ ಸಂಘಟನೆ ಶಕ್ತಿ ಬರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಯಕರೂ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ನಾಯಕರ ಹಿಂದೆ ಸುತ್ತಾಡುವ ಕಾರ್ಯಕರ್ತರಿಗೆ, ಸ್ವಾಮಿಗಳ ಬೆಂಬಲ ಇದ್ದವರಿಗೆ ಅಧಿಕಾರ, ಉನ್ನತ ಹುದ್ದೆ ಸಿಗುತ್ತದೆ ಎಂಬ ಭಾವನೆ ಪಕ್ಷದಲ್ಲಿದೆ. ಅದು ದೂರಾಗಬೇಕು. ವ್ಯವಸ್ಥೆ ಬದಲಾಗಬೇಕೆಂದರೆ ಕಾರ್ಯಕರ್ತರೂ ಪ್ರಶ್ನಿಸುವಂತಾಗಬೇಕು.ಇದು ಗೋವಾ, ಕೇರಳದಲ್ಲಿ ಇದೆ ಎಂದು ತಿಳಿಸಿದರು.

ಪಕ್ಷದ ಸಿದ್ಧಾಂತಗಳನ್ನು ಪ್ರತಿ ಸರಿಯಾಗಿ ಕಾರ್ಯಕರ್ತರೂ ಅರಿಯಬೇಕು. ಕಾರ್ಯಕರ್ತರ ಅಭಿಪ್ರಾಯಕ್ಕೆ ಬೆಲೆ ಸಿಗುವಂತಾಗಬೇಕು. ಬಿಜೆಪಿಯಲ್ಲಿ ವಿಶೇಷ ಏನಿದೆ ಅರಿತು ಪಕ್ಷದಲ್ಲಿ ಸುಧಾರಣೆ ತರಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತನಿಗೂ ಜವಾಬ್ದಾರಿ ಎಂಬುದನ್ನು ನೀಡಿ ಜನರ ವಿಶ್ವಾಸ ಗಳಿಸಿದರೆ ಸುಲಭವಾಗಿ ಯಾವುದೇ ಚುನಾವಣೆಯಲ್ಲಿ ಗೆಲ್ಲಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತರಾಗಬೇಕು ಎಂದು ಸಲಹೆ ನೀಡಿದರು. ಪ್ರದಾನಿ ನರೇಂದ್ರ ಮೋದಿಯ ಭಾಷಣ ಸುಳ್ಳು ಎಂದು ಅರಿಯಲು 8 ವರ್ಷ ಬೇಕಾಯಿತು. ಇಂತಹ ಪ್ರಧಾನಿ ಸಿಕ್ಕಿರುವುದು ದುರ್ದೈವವಾಗಿದೆ. ಸೇವಾದಳದಿಂದ ಬಂದವರನ್ನ ಗುರುತಿಸಬೇಕು. ಸೇವಾದಳದ ಕಾರ್ಯಕರ್ತರು ಶಿಸ್ತಿನಿಂದ ಕೆಲಸ ಮಾಡುತ್ತಾರೆ ಎಂದರು.

ಬಿಜೆಪಿಯಿಂದ ಯಡಿಯೂರಪ್ಪ ಮತ್ತು ಶ್ರೀರಾಮುಲು ಹೊರಬಂದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರೆಲ್ಲ ಒಂದಾದಾಗ ನಾವು ಸೋತಿದ್ದೇವೆ. ಎಲ್ಲರಿಗೂ ಅಧಿಕಾರ ನೀಡಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಇರುವುದರಿಂದ ನಾವೆಲ್ಲ ಚಟುವಟಿಕೆಯಿಂದ ಇದ್ದೇವೆ. ಪಕ್ಷದಲ್ಲಿ ಶಿಸ್ತು ಇರಬೇಕು. ಕಾಂಗ್ರೆಸ್ ಕಾರ್ಯಕರ್ತರು ಶಿಸ್ತನ್ನು ಪಾಲನೆ ಮಾಡಬೇಕು ಎಂದು ಹೇಳಿದರು.ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕರಾದ ಕೆ.ಬಿ ಪ್ರಸನ್ನ ಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಮುಖಂಡರಾದ ಚಂದ್ರಭೂಪಾಲ್, ಶ್ರೀನಿವಾಸ್ ಕರಿಯಣ್ಣ, ಪಲ್ಲವಿ, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…