ಭದ್ರಾ ಅಚ್ಚುಕಟ್ಟಿನ ಕೊನೆಯಂಚಿನ ಭಾಗಕ್ಕೆ ಶತಾಯಗತಾಯ ನೀರು ತಲುಪಿಸುವುದಕ್ಕಾಗಿ ವಾರದಲ್ಲಿ ಎರಡು ದಿನ ನಾಲೆಗಳ ಮೇಲೆ ಒಡಾಡುವುದಾಗಿ ಮಲೆಬೆನ್ನೂರಿನ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಪವಿತ್ರ ರಾಮಯ್ಯ ಅವರು ನೆರೆದಿದ್ದ ನೂರಾರು ರೈತರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ಭರವಸೆ ನೀಡಿ ಅವರು ಮಾತನಾಡಿದರು.

ನಾಲೆಗಳಿಗೆ ನೀರು ಬಿಟ್ಟನಂತರ ಸಸಿಮಡಿ ಬಿಟ್ಟುಕೊಂಡು ಐವತ್ತು ದಿನಗಳಾಗಿದ್ದು, ಈಗಾಗಲೇ ಎರಡು ಬಾರಿ ಭದ್ರಾ ನಾಲೆ ನೀರು ಜಲಾಶಯದ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಉಂಟಾದ ಹಲವಾರು ತಾಂತ್ರಿಕ ಕಾರಣದಿಂದ ಹಾಗೂ ಕಳೆದ ಐದು ದಿನಗಳ ಕೆಳಗೆ ಬಲ ನಾಲೆಗೆ ಅಪರಿಚಿತ ವ್ಯಕ್ತಿ ಹಾರಿ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ನೀರು ನಿಲುಗಡೆ ಮಾಡಿದ್ದರಿಂದ ಅಚ್ಚುಕಟ್ಟು ಭಾಗದಲ್ಲಿ ನೀರು ಹರಿಸಲು ಮಾಡಿರುವ ಆಂತರಿಕ ಸರದಿ ವ್ಯತ್ಯಯವಾಗಿ ಸರಿಯಾದ ಪ್ರಮಾಣದಲ್ಲಿ ನೀರು ಲಭ್ಯವಾಗದೇ ಇರುವುದರಿಂದ ನಾಟಿ ಹಚ್ಚದೆ ಹಾಗೇ ಬಿಟ್ಟುಕೊಂಡಿದ್ದರಿಂದ ಈಗಾಗಲೇ ಸಸಿ ಮಡಿ ಬಲಿತಿದ್ದು ನೀರು ನೀಡುವಿಕೆಯ ಅವಧಿಯನ್ನು ಹೆಚ್ಚಿಸುವಂತೆ ಈ ಮೂಲಕ ಬೆಳೆಗಳನ್ನು ರಕ್ಷಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿ ಕೊನೆಯ ಭಾಗಕ್ಕೆ ನೀರು ತಲುಪಿಸುವುದಕ್ಕಾಗಿ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕೆಂದು ತಾಕೀತು ಮಾಡಲಾಯಿತು. ಕೆಲವು ಇಂಜಿನಿಯರ್ಗಳು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ನಾಲೆಯ ಮೇಲೆ ಒಡಾಡುವುದಿಲ್ಲ ದೂರವಾಣಿ ಕರೆ ಬಂದರೆ ಸ್ವೀಕರಿಸುತ್ತಿಲ್ಲ ಎಂಬ ಮೌಖಿಕ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ರೈತರಿದ್ದರೆ ನಾವು ಅವರಿಲ್ಲದಿದ್ದರೆ ನಾವು ಬದುಕುವುದಕ್ಕೆ ಸಾಧ್ಯವಾ ಎಂದು ಒಮ್ಮೆ ಯೋಚಿಸಿ ಎಂದು ಖಡಕ್ ಎಚ್ಚರಿಕೆ ನೀಡಿಲಾಯಿತು.

ಈ ಸಂದರ್ಭದಲ್ಲಿ ಸ್ಥಳೀಯ ರೈತರಾದ ಮಂಜುಳಮ್ಮ ಮಾತನಾಡಿ, ಸಂಜೆಯ ವೇಳೆಗೆ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ ಇದರಿಂದ ರಾತ್ರಿಯ ವೇಳೆಗೆ ನೀರು ಹಾಯಿಸಿಕೊಳ್ಳಲ್ಲು ತೊಡಕಾಗುತ್ತದೆ ಎಂದಾಗ ಮುಂದಿನ ದಿನಗಳಲ್ಲಿ ಇದಕ್ಕೆಲ್ಲ ಪೂರ್ಣ ವಿರಾಮ ಹಾಕುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿ, ಭದ್ರಾ ಜಲಾಶಯದಿಂದ ಹಾಗೂ ಶಾಂತಿ ಸಾಗರದ ಬಳಿ ಇರುವ ವಿತರಣಾ ನಾಲೆ 2ರಲ್ಲಿ ಪೂರ್ಣ ಪ್ರಮಾಣದ ಗೇಜ್ ಕಾಯ್ದು ಕೊಳ್ಳುವುದಕ್ಕೆ ನಾನು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತೇನೆ ಎಂದು ರೈತರಿಗೆ ಧೈರ್ಯ ತುಂಬಿದರು.

ಈ ಸಮಯದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸಂತೋಷ್, ನಾಗೇಂದ್ರ ಮತ್ತು ಧನಂಜಯ್ ಹಾಗೂ ಸಹಾಯಕ ಅಭಿಯಂತರರಾದ ಪ್ರಕಾಶ್ ಮತ್ತು ರಜತ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…