
ದುರ್ಗಿಗುಡಿ ಶ್ರೀ ಶನೇಶ್ವರ ದೇವಸ್ಥಾನ ಬಳಿ ಚಿಕ್ಕದೊಂದು ಸೈಕಲ್ ಪಂಕ್ಚರ್ ಅಂಗಡಿ ನಡೆಸುತ್ತಿರುವ ರಫೀಕ್ ಖಾನ್ ನಿನ್ನೆ ಕಾರ್ಯ ನಿಮಿತ್ತ ತನ್ನ ಸ್ನೇಹಿತ ಟಿ. ನಾಗರಾಜ್ ಜೊತೆ ಸವಳಂಗ ರಸ್ತೆಯಲ್ಲಿ ಹೋಗುತ್ತಿರುವಾಗ ಚಿಕ್ಕ ಲೇಡೀಸ್ ಪರ್ಸ್ ರಸ್ತೆಯಲ್ಲಿ ಬಿದ್ದಿರುವುದು ಕಾಣಿಸಿತು. ಪರ್ಸ್ ನ್ನು ತೆರೆದು ನೋಡಿದಾಗ ಅದರಲ್ಲಿ ರೂ 10,202/- ಹಣ ಮತ್ತು ಎಟಿಎಂ ಕಾರ್ಡ್ ಗಳು ಇದ್ದವು. ಅದರಲ್ಲಿ ಯಾವುದೇ ವಿಳಾಸ ಚೀಟಿ ಇಲ್ಲದಿರುವುದರಿಂದ ವಿಳಾಸಪತ್ತೆಹಚ್ತಲು ಇಂದು ಬೆಳಗ್ಗೆ ಸಂಬಂಧಿತ ಬ್ಯಾಂಕ್ ಗೆ ತೆರಳಿ ವಿಷಯ ತಿಳಿಸಿ ವಾರೀಸುದಾರರ ದೂರವಾಣಿ ಸಂಖ್ಯೆ ಪಡೆದು ಮಾಹಿತಿ ನೀಡಿದರು.



ಖಾಸಗಿ ಕಂಪನಿ ಯಲ್ಲಿ ಕೆಲಸ ಮಾಡುವ ಧನಲಕ್ಷ್ಮಿ ಎಂಬುವರು ಜಯನಗರ ಬಡಾವಣೆಯೊಂದರ ಪಿ.ಜಿ.ಯಲ್ಲಿ ವಾಸವಾಗಿದ್ದು ಅನಾರೋಗ್ಯ ನಿಮಿತ್ತ ಆಸ್ಪತ್ರೆ ಖರ್ಚಿಗಾಗಿ ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ತಮ್ಮ ಸೈಕಲ್ ನಲ್ಲಿ ತೆರಳುತ್ತಿರುವಾಗ ದಾರಿಯಲ್ಲಿ ಬೀಳಿಸಿಕೊಂಡಿದ್ದರು.
ಇಂದು ಬೆಳಗ್ಗೆ ರಫೀಕ್ ಖಾನ್ ಮತ್ತು ಟಿ. ನಾಗರಾಜ್ ರವರು ಸಂಪೂರ್ಣ ಹಣ ಸಮೇತ ಪರ್ಸ್ ನ್ನು ವಾರೀಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆಯುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಲ್ಲದೆ ಧನಲಕ್ಷ್ಮಿ ಯವರು ಸಂತೋಷದಿಂದ ನೀಡಲು ಬಂದ ಒಂದು ಸಾವಿರ ರೂಪಾಯಿಗಳನ್ನೂ ತೆಗೆದು ಕೊಳ್ಳಲು ನಯವಾಗಿ ನಿರಾಕರಿಸಿ ಹಣಕ್ಕಿಂತ ಜೀವನಮೌಲ್ಯ ಹೆಚ್ಚು ಎಂದು ಸಾಭೀತುಪಡಿಸಿದರು.

ಚಿಕ್ಕ ಸೈಕಲ್ ರಿಪೇರಿ ಅಂಗಡಿ ಇಟ್ಟಕೊಂಡೂ ಪರಿಸರ, ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದರ ಜೊತೆಗೆ ಪ್ರಾಮಾಣಿಕ ನಡೆ ತೋರಿದ *ರಫೀಕ್ ಖಾನ್ ರವರಿಗೆ ನಗರದ *ಚೆನ್ನುಡಿ ಬಳಗ*, *ಪರೋಪಕಾರಂ* ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಅಭಿನಂದನೆ ತಿಳಿಸಿರುತ್ತದೆ.