ಶಿವಮೊಗ್ಗ: ಬಿಜೆಪಿ ಜಾತಿ ವಿಷ ಬೀಜ ಭಿತ್ತಿ ದೇಶಾದ್ಯಂತ ಆಶಾಂತಿ ಉಂಟು ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಆರೋಪಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವರ್ತನೆ ಹಾಗೂ ಪಕ್ಷದ ಮುಖಂಡರ ಹೇಳಿಕೆ ದೇಶಕ್ಕೆ ಮಾರಕವಾಗಿದೆ. ಅಭಿವೃದ್ಧಿ ಕೆಲಸ ಹಾಗೂ ಜನರನ್ನು ಸಮಸ್ಯೆಗಳನ್ನು ಬಗೆಹರಿಸದ ಬಿಜೆಪಿ ಪುಕ್ಕಟೆಯಾಗಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ ಎಂದರು.ಚುನಾವಣೆ ಸಂದರ್ಭದಲ್ಲಿ ನೀಡಿದಂತಹ ಭರವಸೆಗಳನ್ನು ಈಡೇರಿಸದ ಬಿಜೆಪಿ ಸರ್ಕಾರ ಜನರ ತೆರಿಗೆ ಹಣವನ್ನು ಲೂಟಿ ಮಾಡಿ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಆರೋಪಿಸಿದ ಅವರು, ಚುನಾವಣೆ ಬಂದಾಗ ಜನರಲ್ಲಿ ಭಯ ಭೀತಿ ಹುಟ್ಟಿಸಿ ಜಾತಿ ಮತ್ತು ಕೋಮು ಸೌಹಾರ್ಧತೆಗೆ ಧಕ್ಕೆ ತರುವಂತಹ ಪ್ರಯತ್ನ ಮಾಡಿ ಅಧಿಕಾರಕ್ಕೆ ಬರಲು ಯತ್ನಿಸುತ್ತದೆ ಎಂದರು.ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಕೆ.ಎಸ್. ಈಶ್ವರಪ್ಪನವರನ್ನು ಸಂಪುಟದಿಂದ ಕೈಬಿಡಬೇಕು, ಅವರ ವಿರುದ್ಧ ರಾಷ್ಟ್ರದ್ರೋಹದ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಸಚಿವ ಈಶ್ವರಪ್ಪ ಅವರು ರಾಜ್ಯದ ಹಾಗೂ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸಲಿಲ್ಲ. ಜನರ ಭಾವನೆಯನ್ನು ಕೆರಳಿಸುವಂತಹ ಆರ್‍ಎಸ್‍ಎಸ್‍ನವರ ಓಲೈಸುವ ನಿಟ್ಟಿನಲ್ಲಿ ಇಂತಹ ಹೇಳಿಕೆ ನೀಡುವ ಮೂಲಕ ಅಗ್ಗದ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದರು. ನಾನು ದೇಶಭಕ್ತ, ನಮ್ಮ ಪಕ್ಷದವರು ದೇಶ ಭಕ್ತರು ಎಂದು ಈಶ್ವರಪ್ಪನವರು ಹೇಳುತ್ತಿದ್ದಾರೆ. ಇವರು ನಕಲಿ ದೇಶ ಭಕ್ತರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಇವರ ಪಕ್ಷದಲ್ಲಿ ಒಬ್ಬರು ಪ್ರಾಣ ತೆತ್ತಿಲ್ಲ. ಕೇವಲ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಈಶ್ವರಪ್ಪ ಮಾತನಾಡುತ್ತಿದ್ದಾರೆ ಎಂದು ದೂರಿದರು. ನಮ್ಮ ರಾಜ್ಯಾಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್‍ರವರು ತೆರಿಗೆ ವಿಚಾರದಲ್ಲಿ ಜೈಲಿಗೆ ಹೋಗಿದ್ದಾರೆ ಹೊರತು, ಯಾರನ್ನೋ ಕೊಲೆ ಮಾಡಿ, ದರೋಡೆ ಮಾಡಿ ಹೋಗಿಲ್ಲ. ಆದರೆ ಈಶ್ವರಪ್ಪ ಹಾಗೂ ಯಡಿಯೂರಪ್ಪನವರು ಕಳೆದ 25 ವರ್ಷಗಳ ಹಿಂದೆ ಇದ್ದುದ್ದಕ್ಕಿಂತ ಈಗ ಅವರ ಆಸ್ತಿ ಎಷ್ಟು ಮಾಡಿದ್ದಾರೆಂದು ಜನತೆ ನೋಡುತ್ತಿದ್ದಾರೆ. ಇವರೇನು ರಾಜಮನೆತನದಲ್ಲಿ ಹುಟ್ಟಿದ್ದಾರೋ? ಇವೆಲ್ಲವೂ ಅಕ್ರಮ ಸಂಪತ್ತಲ್ಲವೇ? ಎಂದು ಪ್ರಶ್ನಿಸಿದರು.

ಬಿಜೆಪಿಯವರು ಸದಾ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಬ್ರಿಟೀಷರ ಆಡಳಿತಕ್ಕೂ, ಇವರ ಆಡಳಿತಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಜನಸಾಮಾನ್ಯರಲ್ಲಿ ಕೋಮು ಭಾವನೆಯನ್ನು ಬಿತ್ತುವುದು, ಸಮಾಜದಲ್ಲಿನ ಶಾಂತಿ ಕದಡುವುದು ಇವರ ಪ್ರಮುಖ ಅಜೆಂಡಾವಾಗಿದೆ. ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಮಾಡುತ್ತಿದ್ದ ಸಂದರ್ಭದಲ್ಲಿ 700ಕ್ಕೂ ಅಧಿಕ ರೈತರು ಮೃತಪಟ್ಟಿದ್ದಾರೆ. ಅದರ ಬಗ್ಗೆ ಎಲ್ಲಿಯೂ ಕೂಡಾ ಪ್ರಧಾನಿಯವರು ಪ್ರಸ್ತಾಪಿಸುತ್ತಿಲ್ಲ ಎಂದು ಟೀಕಿಸಿದರು. ಪ್ರಸ್ತುತ ನಡೆಯುತ್ತಿರುವ ಹಿಜಾಬ್ ಪ್ರಕರಣವನ್ನು ಮೊದಲು ಹುಟ್ಟು ಹಾಕಿದ್ದೇ ಶಾಸಕ ರಘುಪತಿ ಭಟ್‍ರವರು. ವಿದ್ಯಾರ್ಥಿಗಳಲ್ಲೂ ಕೂಡಾ ಕೋಮು ಭಾವನೆಯನ್ನು ಬಿತ್ತುವಂತಹ ಕಾರ್ಯವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಲ್ಲಿ ಇಂತಹ ಭಾವನೆಯನ್ನು ಮೂಡಿಸುವಂತಹ ಕಾರ್ಯ ಮಾಡಬಾರದು ಎಂದರು. ಫೆ.19ರಂದು ಮಧ್ಯಾಹ್ನ 2.30ಕ್ಕೆ ನಗರದ ಸಾಗರ ರಸ್ತೆಯಲ್ಲಿರುವ ದ್ವಾರಕಾ ಕನ್‍ವೆನ್ಷನ್ ಹಾಲ್‍ನಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಸದಸ್ಯತ್ವ ಡಿಜಿಟಲ್ ಅಭಿಯಾನಕ್ಕೆ ರಾಜ್ಯಾಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಮುಖಂಡರಾದ ಹೆಚ್.ಸಿ. ಯೋಗೀಶ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಮಹೆಕ್ ಷರೀಫ್, ಡಾ.ಶ್ರೀನಿವಾಸ್, ಕಲಗೋಡು ರತ್ನಾಕರ್, ದೀಪಕ್‍ಸಿಂಗ್, ಪಲ್ಲವಿ, ನೇತಾಜಿ, ಸಿ.ಎಸ್.ಚಂದ್ರಭೂಪಾಲ್, ಎಸ್.ಟಿ. ಚಂದ್ರಶೇಖರ್ ಇನ್ನಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…