ಶಿವಮೊಗ್ಗ: ಜಿಲ್ಲೆಯಲ್ಲಿ ಮುಚ್ಚಲ್ಪಟ್ಟಿರುವ ಮತ್ತು ಮುಚ್ಚಲ್ಪಡುತ್ತಿರುವ ಕನ್ನಡ ಸರ್ಕಾರಿ ಶಾಲೆಗಳನ್ನು ಪುನಾರಂಭಿಸಬೇಕೆಂದು ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹೊಸ ಶಿಕ್ಷಣ ನೀತಿ ಅನುಷ್ಠಾನವಾಗುತ್ತಿರುವ ಈ ಕಾಲಘಟ್ಟದಲ್ಲಿ ಪ್ರಾದೇಶಿಕ ಭಾಷೆಯಾದ ಕನ್ನಡ ಮಾಧ್ಯಮ ಶಾಲೆಗಳನ್ನು ಸರ್ಕಾರಿ ವ್ಯವಸ್ಥೆ ಮುಚ್ಚಿಸಲು ಹವಣಿಸುತ್ತಿದೆ ಎಂದು ಆರೋಪಿಸಿದರು.ಜಿಲ್ಲೆಯಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಮುಚ್ಚಿಸುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವುದರ ಬಗ್ಗೆ ದೂರುಗಳು ಬರುತ್ತಿವೆ. ಅಪ್ಪಟ ಮಲೆನಾಡಿನಲ್ಲಿ ಕುವೆಂಪು ಹುಟ್ಟಿದ ಈ ನೆಲದಲ್ಲಿ ನಿರಂತರ ಶಾಲೆಗಳು ಮುಚ್ಚುತ್ತಿರುವ ದೂರುಗಳು ಬರುತ್ತಿವೆ. ಈಗಾಗಲೆ ಜಿಲ್ಲೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಶಾಲೆಗಳು ಮುಚ್ಚಿರುವ ಮಾಹಿತಿ ಇದೆ. ಸರ್ಕಾರಿ ಶಾಲೆಗಳು ಎಲ್ಲಾ ರೀತಿಯ ಸೌಲಭ್ಯ ಹೊಂದಿದ್ದರೂ ಜನರ ವಿಶ್ವಾಸ ಪಡೆಯುತ್ತಿಲ್ಲ. ಹೀಗಾಗಿ ಕೊರತೆ ಏನಿದೆ ಎಂಬುದನ್ನು ಗುರುತಿಸುವ ಪ್ರಯತ್ನ ಆಗಬೇಕು ಎಂದು ಒತ್ತಾಯಿಸಿದರು.

ನಿರಂತರ ವಿಶ್ವಾಸ ತುಂಬುವ ಕೆಲಸ ಆಗಬೇಕು. ಜನರಿಗೆ ಸರ್ಕಾರಿ ಶಾಲೆಗಳು ಕನ್ನಡ ಮಾಧ್ಯಮದ ವಿಚಾರವಾಗಿ ಅರಿವುಂಟು ಮಾಡುವ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.ಜನಪದ ಕಲೆ, ಸಾಹಿತ್ಯ, ಸಾಂಸ್ಕೃತಿಕ ವಾತಾವರಣದಲ್ಲಿ ಜನಸಾಮಾನ್ಯರಿಗೆ ಅರಿವು ವಿಸ್ತರಿಸುವ ಕೆಲಸಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲ್ಲೂಕು, ಹೋಬಳಿ ಶಾಖೆಗಳ ಮೂಲಕ ಸಹಕರಿಸಲು ಸಿದ್ಧರಿದ್ದೇವೆ ಎಂದರು.ಇಲಾಖೆಯವರು ವ್ಯವಸ್ಥಿತವಾಗಿ ಕಾರ್ಯಪ್ರವೃತ್ತರಾಗಲು ಜಿಲ್ಲಾ ಆಡಳಿತ ಅಗತ್ಯ ಸೂಚನೆ ನೀಡಬೇಕು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಮುಚ್ಚಿರುವ ಎಲ್ಲಾ ಶಾಲೆಗಳು ಪುನರ್ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.ಸಾಗರ ತಾಲ್ಲೂಕು ಮರತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರುತಿನಗರ ಗ್ರಾಮದಲ್ಲಿ ಸುಗಮವಾಗಿ ನಡೆಯುತ್ತಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿಸಿ ಸಮೀಪದಲ್ಲಿ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡಲಾಗಿದೆ.

ಯಾವುದೋ ಲಾಬಿಗೆ ಮಣಿದು ಕನ್ನಡ ಮಾಧ್ಯಮ, ಸರ್ಕಾರಿ ಶಾಲೆಗಳು ಮುಚ್ಚುವಂತೆ ಆಗಿದೆ ಎಂದು ದೂರಿದರು.ಅಂಗನವಾಡಿ ಇರುವ ಜಾಗದಲ್ಲಿ ಕಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಳ್ಳಲಾರದೆ ಖಾಸಗಿ ಶಾಲೆ ತೆರೆಯಲು ಅನುಮತಿ ನೀಡುವಾಗ ಯಾವ ನಿಯಮಗಳು ರಕ್ಷಣೆಗೆ ಬಾರದಿರುವುದು ಆಡಳಿತದ ದುರಂತ ಎಂದೇ ಹೇಳಬೇಕಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ನ್ಯಾಯ ಒದಗಿಸಬೇಕು. ಮುಚ್ಚಲ್ಪಟ್ಟಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿದರು.ಮನವಿ ಸಲ್ಲಿಕೆ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ್, ಕೃಷ್ಣಮೂರ್ತಿ, ಮಧುಸೂದನ ಐತಾಳ್, ಶಿವಮೂರ್ತಿ, ಚಂದ್ರಪ್ಪ, ಎಸ್. ಷಣ್ಮುಖಪ್ಪ ಮತ್ತಿತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…