ಶಿವಮೊಗ್ಗ: ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೆರುವಂತೆ ಒತ್ತಾಯಿಸಿ ಎನ್.ಎಸ್.ಯು.ಐ. ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚೆಗೆ ಶಿವಮೊಗ್ಗದ ಕಾಲೇಜು ಒಂದರಲ್ಲಿ ಕೆಲ ವಿದ್ಯಾರ್ಥಿಗಳು ಬಿಜೆಪಿ ನಾಯಕರ ಪ್ರಚೋದನೆಗೆ ಒಳಪಟ್ಟು ರಾಷ್ಟ್ರಧ್ವಜ ಹಾರಿಸುವ ಜಾಗದಲ್ಲಿ ಕೇಸರಿ ಬಾವುಟ ಹಾರಿಸುವುದರ ಮೂಲಕ ರಾಷ್ಟ್ರದ್ರೋಹ ಕೃತ್ಯ ಎಸಗಿದ್ದರೂ ಶಿವಮೊಗ್ಗ ಶಾಸಕರು ನಗರದಲ್ಲಿ ಸಾಮರಸ್ಯ ಕಾಪಾಡುವ ಬದಲು ಕೇಸರಿ ಬಾವುಟ ಹಾರಿಸಿದವರನ್ನು ಸಮರ್ಥಿಸುವುದರ ಜೊತೆಗೆ ದೆಹಲಿ ಕೆಂಪುಕೋಟೆಯಲ್ಲಿ ಮುಂದೊಂದು ದಿನ ಭಗವಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡುವುದರ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ರಾಷ್ಟ್ರದ್ರೋಹಿ ಕೆಲಸ ಮಾಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದನ್ನು ಖಂಡಿಸಿ ಸಚಿವ ಈಶ್ವರಪ್ಪರ ಮೇಲೆ ಕೇಸು ದಾಖಲಿಸಬೇಕು ಹಾಗೂ ಸದನದಲ್ಲಿ ಈ ವಿಚಾರ ಕುರಿತು ನಿಳುವಳಿ ಪ್ರಕಟಿಸಬೇಕೆಂದು ಸಭಾದ್ಯಕ್ಷರನ್ನು ಒತ್ತಾಯಿಸಿದ್ದರು. ಆದರೆ, ಸ್ಪೀಕರ್ ಅವರು ಪಕ್ಷಪಾತವಾಗಿ ವರ್ತಿಸುವ ಮೂಲಕ ನಿಲುವಳಿಗಳಿಗೆ ಅವಕಾಶ ನೀಡದೆ, ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸುವ ಮೂಲಕ ಸ್ಪೀಕರ್ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಈ ಕೂಡಲೇ ರಾಷ್ಟ್ರಪತಿ ಅವರು ಮಧ್ಯಪ್ರವೇಶಿಸಿ ಕರ್ನಾಟಕದಲ್ಲಿ ಕಾಗೇರಿ ಅವರ ಸ್ಪೀಕರ್ ಸ್ಥಾನ ಹಾಗೂ ಈಶ್ವರಪ್ಪನವರ ಸಚಿವ ಸ್ಥಾನವನ್ನು ರದ್ದು ಪಡಿಸಿ ಸಂವಿಧಾನದ ಬಾಧ್ಯತೆಯನ್ನು ಕಾಪಾಡಬೇಕೆಂದು ಒತ್ತಾಯಿಸಿದರು.

ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಕೆ. ದೇವೇಂದ್ರಪ್ಪ, ರಾಜ್ಯ ಎನ್.ಎಸ್.ಯು.ಐ ಕಾರ್ಯದರ್ಶಿ ಹೆಚ್. ಎಸ್, ಬಾಲಾಜಿ, ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ, ದಕ್ಷಿಣ ಬ್ಲಾಕ್ ಉಪಾಧ್ಯಕ್ಷ ಚೀರಂಜಿವಿ ಬಾಬು, ನಗರ ಅಲ್ಪಸಂಖ್ಯಾತರ ಕಾಂಗ್ರೆಸ್ ಅಧ್ಯಕ್ಷ ಮೊಹಮದ್ ನಿಹಾಲ್, ಯುವ ಕಾಂಗ್ರೆಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜು ಪುರಲೆ, ಯುವ ಮುಖಂಡರಾದ ಪ್ರಮೋದ್, ಮಂಜು ಮಡಿವಾಳ, ಸಂದೀಪ್ ಭರತ್, ಚಂದು, ಆದರ್ಶ ಹಾಗೂ ಇತರರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…