ಶಿವಮೊಗ್ಗ: ಸಚಿವ ಸಂಪುಟದಿಂದ ಕೆ.ಎಸ್.ಈಶ್ವರಪ್ಪನವರನ್ನು ಉದ್ಘಾಟಿಸುವಂತೆ ಒತ್ತಾಯಿಸಿ ಇಂದು ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಇದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.

ಸಚಿವ ಈಶ್ವರಪ್ಪ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡವರಂತೆ ದೇಶದ ಐಕ್ಯತೆ, ಭಾವೈಕ್ಯತೆಗೆ ಧಕ್ಕೆ ತರಲು, ಸಾಮರಸ್ಯವನ್ನು ಕದಡಿ ಕೋಮು ಭಾವನೆಗೆ ಪ್ರಚೋದನೆ ನೀಡುವ ನಿಟ್ಟಿನಲ್ಲಿ ಉದ್ರೇಕಕಾರಿಯಾಗಿ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ಸದನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿರುವ ಸಚಿವ ಕೆ.ಎಸ್.ಈಶ್ವರಪ್ಪವರನ್ನು ಸಚಿವ ಸಂಪುಟದಿಂದ ಕೂಡಲೇ ಉಚ್ಚಾಟಿಸಬೇಕು ಎಂದು ಒತ್ತಾಯಿಸಿದರು.ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವ ದಿನಗಳು ಬರಲಿವೆ’ ಎಂದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪನವರನ್ನು ಪೋಲಿಸರು ಕೂಡಲೇ ಬಂಧಿಸಬೇಕು.

ಈ ಮೂಲಕ ದೇಶದ ಅಖಂಡತೆ, ಏಕತೆ, ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು ಎಂದು ಆಗ್ರಹಿಸಿದರು.ಪದೇ ಪದೇ ಬೇಜವಾಬ್ದಾರಿ ಹೇಳಿಕೆ ನೀಡುವಲ್ಲಿ ಈಶ್ವರಪ್ಪ ನಿಸ್ಸೀಮರು. ನಾಲಿಗೆಗೆ ಎಲುಬಿಲ್ಲ ನಿಜ. ಆದರೆ ಸಚಿವ ಈಶ್ವರಪ್ಪಗೆ ತಲೆಯಲ್ಲಿ ಮೆದುಳು ಸಹ ಇದೆಯೋ, ಇಲ್ಲವೋ ಗೊತ್ತಿಲ್ಲ, ಮಾನಸಿಕ ಸ್ಥಿಮಿತತೆ ಕಳೆದುಕೊಂಡಿರುವಂತೆ ಕಾಣುತ್ತಿದೆ. ಇತ್ತೀಚೆಗೆ ಇವರು ತಲೆಗಳನ್ನು ತೆಗೆಯುವ ಬಗ್ಗೆ ಮಾತನಾಡಿದ್ದರು. ದ್ವೇಷಗಳಿಲ್ಲದೆ ಆಡಳಿತ ನಡೆಸುವುದಾಗಿ ಪ್ರಮಾಣವಚನ ಸ್ವೀಕರಿಸಿರುವ ಇವರು ದ್ವೇಷ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಅಧಿವೇಶನದಲ್ಲಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಹೇಗೆ ಮಾತನಾಡಬೇಕೆಂಬ ಕನಿಷ್ಟ ಪರಿಜ್ಞಾನವೂ ಈಶ್ವರಪ್ಪರಿಗೆ ಇಲ್ಲವಾಗಿದೆ ಎಂದು ದೂರಿದರು.

ಸಮಾಜದಲ್ಲಿ ಶಾಂತಿಗೆ ಭಂಗ ಬರುವ ರೀತಿಯಲ್ಲಿ ಹೇಳಿಕೆಗಳನ್ನು ಪದೇ ಪದೇ ನೀಡುವುದರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಈಶ್ವರಪ್ಪ ಅವರನ್ನು ಕೂಡಲೇ ಸಂಪುಟದಿಂದ ಉಚ್ಚಾಟಿಸಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಮೋಹನ್, ಮಾಜಿ ಶಾಸಕರಾದ ಆರ್. ಪ್ರಸನ್ನ ಕುಮಾರ್, ಕೆ.ಬಿ. ಪ್ರಸನ್ನಕುಮಾರ್, ಪ್ರಮುಖರಾದ ಆರ್.ಎಂ. ಮಂಜುನಾಥಗೌಡ, ಹೆಚ್.ಸಿ. ಯೋಗೀಶ್, ಪಲ್ಲವಿ, ಕೆ. ದೇವೇಂದ್ರಪ್ಪ, ಕಲಗೋಡು ರತ್ನಾಕರ್, ಶ್ರೀನಿವಾಸ್ ಕರಿಯಣ್ಣ, ದೀಪಕ್ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…