ಕಸ ಬಂಗಾರ, ಪುನರ್ಬಳಸಿದರೆ ಶೃಂಗಾರ, ಕಸದಿಂದ ರಸ... ಹೀಗೆ ಕಸದ ಕುರಿತು ಅನೇಕ ನಾಣ್ಣುಡಿಗಳಿವೆ. ಕಸವೆಂದರೆ ಮೂಗು ಮುರಿಯುವರೇ ಹೆಚ್ಚು. ಯಾಕೆಂದರೆ ಕಸದ ನಿರ್ವಹಣೆ ಸವಾಲಿನ ಕೆಲಸವೇ ಸರಿ. ಆದರೆ ಸಮರ್ಪಕವಾಗಿ ನಿರ್ವಹಿಸಿದಲ್ಲಿ ಇದು ಬಂಗಾರ ಕೂಡ ಆಗಬಹುದು. ಈ ನಿಟ್ಟಿನಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಸರ್ಕಾರ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಸ್ವಚ್ಚ ಸಂಕೀರ್ಣ ಘಟಕಗಳನ್ನು ಸ್ಥಾಪಿಸುತ್ತಿರುವುದು ಸ್ತುತ್ಯಾರ್ಹವಾಗಿದೆ. ಜಿಲ್ಲೆಯಲ್ಲಿ ಪ್ರಥಮವಾಗಿ ನಿರ್ಮಾಣಗೊಂಡ ಹೊಳಲೂರು ಗ್ರಾ.ಪಂ ಯ ಸ್ವಚ್ಚ ಸಂಕೀರ್ಣ ಘಟಕ ವಿವಿಧ ರೀತಿಯ ಕಸ ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತ, ಮಾದರಿಯಾಗಿದೆ. 2021 ರ ಅಕ್ಟೋಬರ್ ಮಾಹೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪನವರು ಚಾಲನೆ ನೀಡಿದರು.

ಈ ಸ್ವಚ್ಚ ಸಂಕೀರ್ಣ ಘಟಕವು ರೂ.15 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡಿದ್ದು, ಅತ್ಯುತ್ತಮ ಸಂಪನ್ಮೂಲ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಪಂಚಾಯತ್ ಅಧ್ಯಕ್ಷರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ವಸಹಾಯ ಸಂಘದ ಸದಸ್ಯರು ಮತ್ತು ಜನತೆಯ ಸಮನ್ವಯ ಮತ್ತು ಸಹಕಾರದೊಂದಿಗೆ ಹೊಳಲೂರಿನಲ್ಲಿ ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದೇ ರೀತಿ ಜಿಲ್ಲೆಯಲ್ಲಿ 113 ಸ್ವಚ್ಚ ಸಂಕೀರ್ಣ ಘಟಕ ನಿರ್ಮಾಣಗೊಂಡಿವೆ. ರೂ.9 ಲಕ್ಷ, ರೂ.11 ಲಕ್ಷ ಮತ್ತು ರೂ.15 ಲಕ್ಷ ಹೀಗೆ ವಿವಿಧೆಡೆ ಘಟಕಗಳನ್ನು ನಿರ್ಮಿಸಿ ನಿರ್ವಹಿಸಲಾಗುತ್ತಿದೆ. ತ್ಯಾಜ್ಯವನ್ನು ಸಮಸ್ಯೆಯಾಗಿ ಪರಿಗಣಿಸದೆ ಒಂದು ಅವಕಾಶವಾಗಿ ಬಳಸಿ, ಶಿವಮೊಗ್ಗ ಜಿಲ್ಲೆಯನ್ನು ಸ್ವಚ್ಚ ಸುಂದರವಾಗಿ ರೂಪಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಆರಂಭಿಕವಾಗಿ ಒಣ ಕಸ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.

ಪ್ರಾರಂಭದ ದಿನಗಳಲ್ಲಿ ಪ್ರತಿ ಮನೆಗೆ ಹಸಿ ಕಸ ವಿಂಗಡಣೆಗೆ ಕಸದ ಬುಟ್ಟಿಗಳನ್ನು ಗ್ರಾಮ ಪಂಚಾಯತಿಯಿಂದ ವಿತರಣೆ ಮಾಡಲಾಯಿತು. ಒಣ ಕಸ ಮನೆಹಂತದಲ್ಲಿ ಕಸ ವಿಂಗಡಣೆ ಮಾಡಲು ಮಾಹಿತಿ, ಶಿಕ್ಷಣ, ಸಂವಹನ ಕಾರ್ಯಕ್ರಮವನ್ನು ವಿವಿಧ ರೀತಿಯಲ್ಲಿ ಆಯೋಜನೆ ಮಾಡಲಾಯಿತು. ಪ್ರತಿ ಮನೆಗೆ ಹಸಿ ಕಸ ಒಣ ಕಸ ವಿಂಗಡಣೆಗೆ ಬುಟ್ಟಿಗಳನ್ನು ಗ್ರಾಮ ಪಂಚಾಯತಿಯಿಂದ ವಿತರಣೆ ಮಾಡಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಚುನಾಯಿತ ಪ್ರತಿನಿಧಿಗಳಿಗೆ ಸ್ವಸಹಾಯ ಸಂಘಗಳ ಸದಸ್ಯರಿಗೆ, ವಿಧ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಕಸ ವಿಂಗಡಣೆ ಸ್ವಚ್ಛ ಸಂಕಿರ್ಣ ಘಟಕಗಳ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾರ್ಯಕ್ರಮ ನಡೆಸಲಾಯಿತು.ಶಿವಮೊಗ್ಗ ಜಿಲ್ಲೆಯ 268 ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯ ಹಂತ 1 ರಲ್ಲಿ 35 ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛ ಸಂಕಿರ್ಣ ಘಟಕಗಳು ನಿರ್ಮಾಣ ಮಾಡಲಾಗಿದೆ.

ಯೋಜನೆಯ ಹಂತ 2 ರಲ್ಲಿ 192 ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯಡಿ ಸ್ವಚ್ಚ ಸಂಕಿರ್ಣ ಘಟಕಗಳಿಗೆ ಅನೂಮೊದನೆ ದೊರತಿರುತ್ತದೆ. ನರೇಗಾ ಯೋಜನೆಯಡಿ ಇವರೆಗೆ 113 ಸ್ವಚ್ಛ ಸಂಕಿರ್ಣ ಘಟಕಗಳು ಪೂರ್ಣಗೊಂಡಿರುತ್ತದೆ. ಹಾಗೂ ಕೆಲವು ಘಟಕಗಳು ಪ್ರಗತಿ ಹಂತದಲ್ಲಿರುತ್ತದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಯಲ್ಲಿ ಎನ್‍ಆರ್‍ಎಲ್‍ಎಂ ನಡಿ ಬರುವ ಸ್ವಸಹಾಯ ಸಂಘಗಳ ಸದಸ್ಯರೊಂದಿಗೆ ಸ್ವಚ್ಛ ಸಂಕಿರ್ಣ ಘಟಕ ನಿರ್ವಹಣೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. 2014 ರ ಅಕ್ಟೋಬರ್ 02 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲಾಗಿರುವ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ್ ಮಿಷನ್. ಈ ಯೋಜನೆ ಆರಂಭವಾದಾಗಿನಿಂದಲೂ ಮೂಲಭೂತ ಸೌಕರ್ಯಗಳ ನಿರ್ಮಾಣ ಮಾಡುವುದರೊಂದಿಗೆ ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ನೀರು ಸರಬರಾಜು ಮತ್ತು ನೀರಿನ ಬಳಕೆಯ ಬಗ್ಗೆ ಗ್ರಾಮೀಣ ಸಮುದಾಯಕ್ಕೆ ಜಾಗೃತಿ ಮೂಡಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದು, ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯು ಮುಂಚೂಣಿಯಲ್ಲಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯು ಮಹಾತ್ಮ ಗಾಂಧಿ ನರೇಗಾ ಯೋಜನೆಯ ಒಗ್ಗೂಡಿಸುವಿಕೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ 113 ಸ್ವಚ್ಚ ಸಂಕೀರ್ಣ ಘಟಕ ನಿರ್ಮಾಣ ಪೂರ್ಣಗೊಂಡಿದೆ.

ಎನ್‍ಆರ್‍ಎಲ್‍ಎಂ ನಡಿ ಬರುವ ಸ್ವಸಹಾಯ ಗುಂಪುಗಳ ಮಹಿಳೆಯರೇ ಕಸ ವಿಂಗಡಣೆ ಕಾರ್ಯದಲ್ಲಿ ತೊಡಗಿರುವುದು ಹಾಗೂ ಕಸ ಸಂಗ್ರಹ ವಾಹನ ಗ್ರಾಮ ವಾಹಿನಿಯ ಡ್ರೈವರ್ ಕೂಡ ಸ್ವಸಹಾಯ ಗುಂಪಿನ ಮಹಿಳೆಯರೇ ಆಗಿರುವುದು ವಿಶೇಷ. ಇವರಿಗೆ ತರಬೇತಿ ಮತ್ತು ವಾಹನ ಚಾಲನೆ ಪರವಾನಿಗಿ ನೀಡಲಾಗಿದೆ. ಹಾಗೂ ಘಟಕದ ನಿರ್ವಹಣೆಗೆ ಪ್ರತಿ ಘಟಕಕ್ಕೆ ಓರ್ವ ಸ್ವಚ್ಚ ಸಂಕೀರ್ಣ ಮೇಲ್ವಿಚಾರಕರ ನೇಮಕ ಮಾಡಲಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನರೇಗಾ ಮೂಲಕ ದ್ರವ ತ್ಯಾಜ್ಯ ನಿರ್ವಹಣೆಗೆ ವಿಸ್ತ್ರತ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದ್ದು, ಸದರಿ ಕಾಮಗಾರಿ ಕೂಡ ಅನುಷ್ಠಾನ ಹಂತದಲ್ಲಿದೆ ಎಂದು ಜಿ.ಪಂ, ಸಿಇಓ ಎಂ ಎಲ್ ವೈಶಾಲಿ ಹೇಳಿದರು.

ಘಟಕದ ಕಾರ್ಯನಿರ್ವಹಣೆ : ಗ್ರಾಮ ಪಂಚಾಯಿತಿ ಸ್ವಚ್ಚ ವಾಹಿನಿ ವಾಹನ ಪ್ರತಿ ಮನೆಗಳು, ಅಂಗಡಿ, ಹೋಟೆಲ್ ಇತ್ಯಾದಿಗಳಿಂದ ಕಸವನ್ನು ಸಂಗ್ರಹಿಸಿ ಸ್ವಚ್ಚ ಸಂಗ್ರಹ ಘಟಕಕ್ಕೆ ತಲುಪಿಸುತ್ತದೆ. ನಂತರ ಸಂಸ್ಕರಣಾ ಘಟಕದಲ್ಲಿ ನೀರಿನ ಬಾಟಲಿ, ಪ್ಲಾಸ್ಟಿಕ್ ಕವರ್, ಇತರೆ ಬಾಟಲಿಗಳು ಮತ್ತು ಪ್ರತಿ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಆಯಾ ವಿಭಾಗಕ್ಕೆ ಹಾಕಲಾಗುತ್ತದೆ. ಮರುಬಳಕೆ ಮಾಡಬಹುದಾದ ಕಸವನ್ನು ಮರುಬಳಕೆ ಮಾಡುವುದು, ಪ್ಲಾಸ್ಟಿಕ್ ಬಾಟಲಿಗಳು, ಡಬ್ಬಗಳು, ಪೇಪರ್ ಇತರೆ ಕಸದಲ್ಲಿ ಅಲಂಕಾರಿಕ ವಸ್ತುಗಳನ್ನು ಸಹ ಮಾಡಬಹುದು.


ಹಸಿಕಸ ಗೊಬ್ಬರ: ತರಕಾರಿ ಸಿಪ್ಪೆ, ಉಳಿದ ಆಹಾರ, ಹೂವು-ಎಲೆಗಳು ಸೇರಿದಂತೆ ಇನ್ನಿತರೆ ಕೊಳೆಯುವ ವಸ್ತುಗಳನ್ನು ಹಸಿ ಕಸ ಸಂಗ್ರಹ ತೊಟ್ಟಿಯಲ್ಲಿ ಸುರಿದು, ಗೊಬ್ಬರವನ್ನಾಗಿ ಮಾಡಲಾಗುತ್ತದೆ.
ಇಂಗು ಗುಂಡಿ : ಸ್ವಚ್ಚ ಸಂಕೀರ್ಣದಲ್ಲಿ ಬಳಕೆಯಾದ ನೀರು ಹರಿದು ಹೋಗದಂತೆ ತಡೆಯಲು ಇಂಗು ಗುಂಡಿಯನ್ನೂ ನಿರ್ಮಿಸಲಾಗಿದೆ.
ಪೈಪ್ ಕಾಂಪೋಸ್ಟ್ : ಇದನ್ನು ಮನೆ, ಶಾಲಾ-ಕಾಲೇಜು ಹಂತಗಳಲ್ಲಿ ಅಳವಡಿಸಿಕೊಳ್ಳಬಹುದು. 5 ರಿಂದ 6 ಇಂಚು ಅಗಲದ ಪೈಪನ್ನು ಮಣ್ಣಿನೊಳಗೆ ಹೂತು ಹಸಿ ಕಸವನ್ನು ಹಾಕಬೇಕು. ನಂತರ ಅದಕ್ಕೆ ಬೆಲ್ಲ, ಸಗಣಿ ಮತ್ತು ಮಣ್ಣು ಹಾಕಬೇಕು. ಹೀಗೆ ಪೈಪಿನೊಳಗೆ ಗೊಬ್ಬರ ಸಿದ್ದಪಡಿಸಿ ಕೈತೋಟಕ್ಕೆ ಬಳಸಬಹುದು. ಇಂತಹ ಪೈಪ್ ಕಾಂಪೋಸ್ಟ್‍ಗಳನ್ನು ಸಹ ಸ್ವಚ್ಚ ಸಂಕೀರ್ಣ ಘಟಕಗಳಲ್ಲಿ ಅಳವಡಿಸಲಾಗಿದೆ.
ಗೋಡೆ ಬರಹ: ಸ್ವಚ್ಚ ಸಂಕೀರ್ಣ ಘಟಕದ ಸುತ್ತಲೂ ಕಸ ವಿಂಗಡಣೆ, ಗೊಬ್ಬರ ತಯಾರಿಕೆಗೆ ಸಂಬಂಧಿಸಿದಂತೆ ಗೋಡೆ ಬರಹಗಳನ್ನು ಬರೆದು ಜನ ಜಾಗೃತಿ ಮೂಡಿಸುವ ಪ್ರಯತ್ನ ಕೂಡ ಮಾಡಲಾಗುತ್ತಿದೆ.

ವರದಿ ಮಂಜುನಾಥ್ ಶೆಟ್ಟಿ…