ಶಿವಮೊಗ್ಗ: ಸಂವಿಧಾನಕ್ಕೆ ಗೌರವ ಕೊಡದವರು, ನ್ಯಾಯಾಲಯದ ಆದೇಶ ಪಾಲಿಸದಿರುವವರು ದೇಶದಲ್ಲಿ ಇರಲು ಲಾಯಕ್ ಇಲ್ಲ ಎಂದು ಬಿಜೆಪಿ ಮುಖಂಡ ಹಾಗೂ ಮಹಾನಗರಪಾಲಿಕೆಯ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ(ಚೆನ್ನಿ) ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ್ರೋಹಿಗಳಿಗೆ ದೇಶದಲ್ಲಿ ಜಾಗವಿಲ್ಲ. ಬೇಕಿದ್ದರೆ ದೇಶವನ್ನು ತೊರೆಯಿರಿ ಎಂದರು. ದಿಕ್ಕು ದೆಸೆ ಇಲ್ಲದ ಕಾಂಗ್ರೆಸ್ನರವರಿಂದ ದೇಶಭಕ್ತಿ ಪಾಠ ಹೇಳಿಕೊಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಯುವ ಕಾರ್ಯಕರ್ತರು ಬಿಜೆಪಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ. ಇದನ್ನು ನಾನು ಸ್ವಾಗತ್ತಿಸುತ್ತೇನೆ. ಏಕೆಂದರೆ ರಾಷ್ಟ್ರಭಕ್ತರ ಕಚೇರಿಗೆ ಬಂದು ಒಂದು ರೀತಿಯಲ್ಲಿ ಕಾಂಗ್ರೆಸ್ನ್ವರು ತಮ್ಮ ಪಾಪವನ್ನು ತೊಳೆದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ನ ನಲಪಾಡ್ ನಂತವರು ರೌಡಿ ಶೀಟ್ ನಲ್ಲಿದ್ದಾರೆ. ಅಂತವರು ಈಶ್ವರಪ್ಪನವರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಎಂದರೆ ಮತ್ತು ಅವರನ್ನು ಕಾಂಗ್ರೆಸ್ ಪಕ್ಷ ಸಹಿಸಿಕೊಂಡಿದೆ ಎಂದರೆ ಅರ್ಥವಿಲ್ಲದ್ದಾಗಿದೆ. ಅವರ ಮಾತು ಕೇಳಿ ಶಿವಮೊಗ್ಗದ ಯುವ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ್ಪ ಅವರ ಮನೆಗೆ ಮುತ್ತಿಗೆ ಹಾಕುತ್ತಿರುವುದು ಕೂಡ ಅಸಂಬದ್ದವಾಗಿದೆ ಎಂದರು.ದೇಶದಲ್ಲಿರುವವರು ವಂದೇಮಾತರಂ ಹೇಳಬೇಕು. ಸದನದಲ್ಲಿ ಅರ್ಥವಿಲ್ಲದ ಹೋರಾಟಕ್ಕೆ ಕೈ ಹಾಕಿರುವ ಕಾಂಗ್ರೆಸ್ ಅರಾಜಕತೆ ಸೃಷ್ಠಿಸುತ್ತಿದೆ. ದೆಹಲಿಯಲ್ಲಿ ನಡೆದ ರೈತರ ಹೋರಾಟದಲ್ಲಿ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಕಿತ್ತು ಹಾಕಿ ಖಲಿಸ್ಥಾನದ ಧ್ವಜವನ್ನು ಹಾರಿಸಿದಾಗ ಇದೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಲಿಲ್ಲ. ರಾಷ್ಟ್ರಧ್ವಜವೇ ಇಲ್ಲದ ಕಂಬಕ್ಕೆ ಭಗವಾಧ್ವಜ ಹಾರಿಸಿದ್ದಕ್ಕೆ ವಿರೋಧಿಸುತ್ತಿದೆ ಎಂದು ಟೀಕಿಸಿದರು.

ಸಮಾರಂಭವೊಂದರಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೇಸರಿ ಪೇಟವನ್ನು ಹಾಕಲು ಬಂದಾಗ ಕಿತ್ತು ಹಾಕಿದ್ದಾರೆ. ಸಂವಿಧಾನ ಹಕ್ಕಿನ ಬಗ್ಗೆ ಕೆಲ ಕರ್ತವ್ಯವನ್ನು ಸಂವಿಧಾನ ಹೇಳಿದೆ. ಇದನ್ನು ಸಿದ್ದರಾಮಯ್ಯ ಯಾಕೆ ಪಾಲಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರು ಶಿವಮೊಗ್ಗಕ್ಕೆ ಬಂದಲ್ಲಿ ಭಗವಾಧ್ವಜ ಹಿಡಿದು ಪ್ರದರ್ಶಿಸಲಾಗುವುದು ಎಂದರು.ಹಿಜಾಬ್ ಬಗ್ಗೆ ನಮ್ಮ ವಿರೋಧವಿಲ್ಲ. ಹಿಜಾಬ್ ಧರಿಸುವ ಹಕ್ಕು ಮುಸ್ಲಿಂ ಮಹಿಳೆಯರಿಗೆ ಇದೆ. ಆದರೆ ಶಾಲೆ ಕಾಲೇಜುಗಳಲ್ಲಿ ಧರಿಸಿ ತರಗತಿಗೆ ಹಾಜರಾಗುವಂತಿಲ್ಲ. ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿನಿಗೆ ಬಹುಮಾನ ನೀಡಲಾಗಿದೆ. ಆದರೆ ಕೇಸರಿ ಧ್ವಜ ಹಾರಿಸಿದ ವಿದ್ಯಾರ್ಥಿಗೆ ಎಫ್ಐಅಆರ್ ಹಾಕಿಸುತ್ತೀರ. ದೇಶದ ಸಂವಿಧಾನಕ್ಕೆ ಗೌರವ ನೀಡದಿದ್ದರೆ ದೇಶದಲ್ಲಿ ಇರಬೇಡಿ ಎಂದು ಗುಡುಗಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಜಗದೀಶ್, ಸೂಡಾ ಅಧ್ಯಕ್ಷ ನಾಗರಾಜ್, ಉಪಮೇಯರ್ ಶಂಕರ್ಗವನ್ನಿ, ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಇ.ವಿಶ್ವಾಸ್, ಮುಖಂಡರಾದ ಬಳ್ಳೆಕೆರೆ ಸಂತೋಷ್, ಕೆ.ವಿ.ಅಣ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…