ಶಿವಮೊಗ್ಗ: ಸಚಿವ ಕೆ.ಎಸ್.ಈಶ್ವರಪ್ಪನವರನ್ನು ದೇಶದ್ರೋಹಿ ಎಂದು ಸುಳ್ಳು ಆಪಾದನೆ ಮಾಡಿ ಗೂಂಡ ವರ್ತನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸದಸ್ಯರ ನಡವಳಿಕೆಯನ್ನು ವಿರೋಧಿಸಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗದ ಸರ್ಕಾರಿ ಕಾಲೇಜಿನ ಮುಂಭಾಗದಲ್ಲಿ ಯಾವುದೇ ಬಾವುಟವಿಲ್ಲದೆ ಖಾಲಿ ಇದ್ದ ಧ್ವಜಸ್ತಂಭ ಏರಿ ಕೇಸರಿ ಧ್ವಜ ಹಾರಿಸಿದ ಹುಡುಗರು ಹಿಜಾಬ್ ವಿರುದ್ಧದ ಆಕ್ರೋಶ ವ್ಯಕ್ತಪಡಿಸಿದ ವಿಷಯವನ್ನು ಸುಳ್ಳು ಸುದ್ದಿಯನ್ನಾಗಿ ತಿರುಚಿ, ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದರೆಂಬ ವಾಸ್ತವಕ್ಕೆ ವ್ಯತಿರಿಕ್ತವಾದ ವಿಷಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ನಡುವೆ ಹಿಂದು ವಿರೋಧಿ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ ಶಿವಕುಮಾರ್ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಕ್ಕೆಅವಮಾನವಾಗಿದೆ ಎಂದು ಇಲ್ಲದ ಸಲ್ಲದ ವಿವಾದ ಹುಟ್ಟುಹಾಕಿದರು ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನಂತರ ಮಾಧ್ಯಮದವರು ಈಶ್ವರಪ್ಪನವರನ್ನು ಕೇಳಿದಾಗ, ಖಾಲಿ ಧ್ವಜಸ್ತಂಭ ಏರಿ ಭಗವಾಧ್ವಜ ಹಾರಿಸಿದರೇ ಹೊರತು ಯಾವುದೇ ರಾಷ್ಟ್ರಧ್ವಜ ಇಳಿಸಿ ಅವಮಾನ ಮಾಡಿಲ್ಲವೆಂದು, ರಾಷ್ಟ್ರಧ್ವಜದ ಕುರಿತು ನಮಗೆ ಗೌರವವಿದೆ ಎಂದು ಸ್ಪಷ್ಟಪಡಿಸಿದರು. ಆದರೂ ಕಾಂಗ್ರೆಸಿಗರು ಈಶ್ವರಪ್ಪನವರು ರಾಷ್ಟ್ರ ಧ್ವಜವನ್ನು ಅಗೌರವಿಸಿದರೆಂದು ಹೇಳಿ ದೇಶದ್ರೋಹಿ ಎಂದು ಪದೇ ಪದೇ ಕರೆದು ಅವಮಾನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸದನದಲ್ಲಿ ಇದೇ ವಿಷಯವಾಗಿ ಈಶ್ವರಪ್ಪನವರು ರಾಷ್ಟ್ರಧ್ವಜಕ್ಕೆ ಅವಮಾನಿಸಿದರೆಂದು ಸುಳ್ಳು ಅಪಾದನೆ ಮಾಡುತ್ತಾ ಯಾವುದೇ ಕಲಾಪ ನಡೆಯಲು ಬಿಡದೆ ಧರಣಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ವಿಧಾನಸಭೆಯಲ್ಲಿ ರಾಷ್ಟ್ರಧ್ವಜಗಳನ್ನು ಬೇಕಾಬಿಟ್ಟಿ ಹಿಡಿದು ಪ್ರದರ್ಶಿಸಿ ರಾಷ್ಟ್ರ ಧ್ವಜದ ಘನತೆಗೆ ಅಪಚಾರವೆಸಗಿದ್ದಾರೆ ಎಂದು ದೂರಿದರು.

ಈ ಗಂಭೀರವಾದ ವಿಷಯವನ್ನು ತಾವು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟು ಈ ದುರ್ನಡತೆಗೆ ಕಾರಣರಾದ ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಹಾಗೂ ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಶಾಸಕರ ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕೆಂಬ ಮನವಿಯನ್ನು ರಾಜ್ಯಪಾಲರಿಗೆ ತಲುಪಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಇ.ವಿಶ್ವಾಸ್, ಸುರೇಖಾ ಮುರುಳೀಧರ್, ಸುವರ್ಣ ಶಂಕರ್, ಬಳಗದ ದೀನದಯಾಳ್, ಸೀತಾಲಕ್ಷ್ಮೀ, ಶಿವಾಜಿ, ರಾಜರಾಮ್ ಭಟ್, ಪ್ರೀತಮ್, ರಾಜರಾಮ್, ಎಸ್.ಚೇತನ್, ಹರ್ಷ, ಆರ್.ರಾಕೇಶ್, ದಿನೇಶ್ ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…