ಶಿವಮೊಗ್ಗ: ಕೆಲವು ಮತೀಯ ಸಂಸ್ಥೆಗಳು ಮುಗ್ದ ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸಕ್ಕೆ ಕೈ ಹಾಕಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಡಿ.ಪಿ.ಐ., ಪಿಎಫ್ಐ ಸಂಸ್ಥೆಗಳು ಹಿಜಾಬ್ ವಿಷಯಗಳನ್ನು ಮುಂದಿಟ್ಟುಕೊಂಡು ಮುಗ್ದ ವಿದ್ಯಾರ್ಥಿಗಳ ಮನಸ್ಸನ್ನು ಹಾಳು ಮಾಡುತ್ತಿದೆ. ಜೊತೆಗೆ ಶಾಂತಿ ಭಂಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ದೇಶದಲ್ಲಿ ಕರ್ನಾಟಕ ರಾಜ್ಯ ಶಾಂತಿ ಸುವ್ಯವಸ್ಥೆಗೆ ಹೆಸರುವಾಸಿಯಾಗಿದೆ. ಆದರೆ ಕೆಲವರು ಹಿಜಾಬ್ ವಿಷಯ ಇಟ್ಟುಕೊಂಡು ಶಾಂತಿ ಹದಗೆಡಿಸಿ ರಾಜ್ಯಕ್ಕೆ ಕಪ್ಪುಚುಕ್ಕೆ ಇಡುವ ಕೆಲಸವಾಗಿದೆ.  ಈ ಬಗ್ಗೆ ಎಚ್ಚರವಹಿಸುವುದು ಅನಿವಾರ್ಯವಾಗಿದೆ ಎಂದರು.ಸದನಸಲ್ಲಿ ಈಗಾಗಲೇ ಚರ್ಚೆ ಕೂಡ ನಡೆಯುತ್ತಿದೆ. ಸರ್ಕಾರ ತನ್ನ ತೀರ್ಮಾನ ಸರಿಯಾಗಿ ತೆಗೆದುಕೊಳ್ಳುವ ಸಮಯದಲ್ಲೇ ಕಾಂಗ್ರೆಸ್ನ ರಾಜಕೀಯ ಮುಖಂಡರು ಸದನದ ಒಳಗೂ ಶಾಂತಿ ಭಂಗ ತರುವ ಕೆಲಸವನ್ನು ಮಾಡುತ್ತಿದ್ದಾರೆ.

ಆಕ್ರೋಶದಿಂದ ಮಾತನಾಡುತ್ತಾ ಸದನದ ಸಮಯವನ್ನು ಬೇರೆ ದಿಕ್ಕಿನತ್ತ ಕೊಂಡೊಯುತ್ತಿದ್ದಾರೆ ಎಂದು ಆರೋಪಿಸಿದರು.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಳ್ಲು ಪ್ರಚಾರದ ಮೂಲಕ ವಿಧಾನಸಭಾ ಕಲಾಪ ಹಾಳು ಮಾಡುತ್ತಿದ್ದಾರೆ. ಲಾಲ್ ಚೌಕ್ ನಲ್ಲಿ ದೇಶದ್ರೋಹಿಗಳು ತಾಕತ್ತಿದ್ದರೆ ಭಾರತದ ರಾಷ್ಟ್ರಧ್ವಜ ಹಾರಿಸಿ ಎಂದು ಧಮಕಿ ಹಾಕಿದಾಗ ನಮ್ಮ ನಾಯಕರಾದ ಈಶ್ವರಪ್ಪ, ಯಡಿಯೂರಪ್ಪ ಗುಂಡಿಗೆ ಎದೆಕೊಟ್ಟು ಧ್ವಜ ಹಾರಿಸಿದ್ದಾರೆ. ನಿಮ್ಮಿಂದ ನಾವು ದೇಶ ಭಕ್ತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ. ರಾಜಕಾರಣಕ್ಕೆಬೇರೆ ಏನೂ ವಿಷಯ ಸಿಗದೇ ಇರುವುದರಿಂದ ಒಂದು ಹಿಜಾಬ್ ವಿಚಾರ ಹಿಡಿದುಕೊಂಡು ಶಾಂತಿ ಭಂಗದ ಯತ್ನ ಮಾಡುತ್ತಿದ್ದೀರಿ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಸದನ ನಡೆಸಲು ಅವಕಾಶ ಕೊಟ್ಟು ಅಭಿವೃದ್ಧಿ ಬಗ್ಗೆ ಮಾತನಾಡಿ. ಮಕ್ಕಳ ಮನಸ್ಸನ್ನು ಹಾಳು ಮಾಡಬೇಡಿ ಎಂದರು.

ಅಲ್ಪ ಸಂಖ್ಯಾತರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ಬಿಜೆಪಿ ಸರ್ಕಾರ ಯಾರಿಗೂ ಬೇಧ ಭಾವ ಮಾಡದೇ ಸರಿಯಾದ ದಿಕ್ಕಿನಲ್ಲಿ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಎನ್.ಜೆ. ನಾಗರಾಜ್, ಮೇಯರ್ ಸುನೀತಾ ಅಣ್ಣಪ್ಪ, ಎನ್.ಕೆ. ಜಗದೀಶ್, ಕೆ.ವಿ. ಅಣ್ಣಪ್ಪ ಮುಂತಾದವರಿದ್ದರು.ಬಾಕ್ಸ್:ನವುಲೆಯಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ, ಮಕ್ಕಳಲ್ಲಿ ವಿಜ್ಞಾನದ ಆಸಕ್ತಿ ಮೂಡಿಸಲು ಮತತ್ಉ ವಿಜ್ಞಾನ ಶಿಬಿರ ಏರ್ಪಡಿಸಲು ಶಿವಮೊಗ್ಗದಲ್ಲಿ ಒಂದು ವಿಜ್ಞಾನ ಕೇಂದ್ರ ಸ್ಥಾಪನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಇದಕ್ಕಾಗಿ ನವುಲೆಯಲ್ಲಿ 8 ಎಕರೆ ಜಾಗ ಗುರುತಿಸಿದ್ದು, ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆಗೆ ಆಗಮಿಸುತ್ತಿದೆ. ಕೇಂದ್ರದಿಂದ ಸುಮಾರು 22 ಕೋಟಿ ರೂ. ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಅನುದಾನ ಮಂಜೂರಾತಿಯಾಗುವ ಸಾಧ್ಯತೆ ಇದ್ದು, ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆ ಮೂಡಿಸಲು ಇದು ಸಹಕಾರಿಯಾಗಲಿದೆ. ವಿಜ್ಞಾನ ವಸ್ತು ಸಂಗ್ರಹಾಲಯ ಕೂಡ ಈ ಕೇಂದ್ರದಲ್ಲಿ ಇರಲಿದೆ ಎಂದು ರಾಘವೇಂದ್ರ ತಿಳಿಸಿದರು. 

ವರದಿ ಮಂಜುನಾಥ್ ಶೆಟ್ಟಿ…