
ಶಿವಮೊಗ್ಗ: ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನ ವಿಕಸನ ವ್ಯಕ್ತಿತ್ವದಲ್ಲಿ ಅಡಗಿದೆ. ಮನುಷ್ಯ ಮೊದಲು ತನ್ನೊಳಗೆ ತಾನು ವಿಕಸನಗೊಳಿಸಬೇಕು. ಆತ್ಮವಿಶ್ವಾಸದಿಂದ ಇರಬೇಕು. ಯಾವತ್ತು ಸೋಲಿಗೆ ಹೆದರಬಾರದು. ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟು ಎಂದು ಅಂತರಾಷ್ಟ್ರೀಯ ತರಬೇತುದಾರ, ಲೇಖಕ ಆರ್.ಎ.ಚೇತನ್‌ರಾಮ್ ಹೇಳಿದರು.

ಶಿವಮೊಗ್ಗ ನಗರದ ಕಲ್ಲಳ್ಳಿಯ ಶಿವಗಂಗಾ ಯೋಗಕೇಂದ್ರದಲ್ಲಿ ಹಮ್ಮಿಕೊಳ್ಳಲಾದ “ಸಾಧ್ಯವೆಂದರೆ ಸಾಧ್ಯ, ಆತ್ಮವಿಶ್ವಾಸವೇ ಯಶಸ್ಸಿನ ಗುಟ್ಟು” ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ, ಸಾಧ್ಯವೆಂದರೆ ಎಲ್ಲವೂ ಸಾಧ್ಯವಾಗಲಿದೆ. ಯಾವುದು ಅಸಾಧ್ಯವಲ್ಲ. ಮೂಲತಃ ಸ್ವತಃ ನಂಬಿಕೆ ಇರಬೇಕು ಎಂದು ತಿಳಿಸಿದರು.
ಮಕ್ಕಳಲ್ಲಿ ಸಂಸ್ಕಾರ ಹಾಗೂ ಭರವಸೆಯ ಆತ್ಮವಿಶ್ವಾಸದ ಕೊರತೆ ಇದೆ. ಅದನ್ನು ಹೆಚ್ಚಿಸಬೇಕಿದ್ದು, ಸೋಲು ತಾತ್ಕಾಲಿಕ, ಗೆಲುವು ಶಾಶ್ವತ ಆಗಿದೆ. ಸೋಲು ಗೆಲುವಿನ ವಿರುದ್ಧವಲ್ಲ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರಿಂದ ಯಶಸ್ಸು ಸಾಧ್ಯವಿದೆ. ಶ್ರದ್ಧೆ ಅತ್ಯಂತ ಮುಖ್ಯ ಎಂದರು.

ಯೋಗ ನಮ್ಮ ದೇಹದ ಅಂಗವನ್ನು ಸದೃಢವಾಗಿರಲು ನೆರವಾಗುತ್ತದೆ. ನಮ್ಮ ಮನಸ್ಸಿನಲ್ಲಿ ಆತ್ಮವಿಶ್ವಾಸ ವೃದ್ಧಿಸಲು ಸಹಕಾರಿಯಾಗುತ್ತದೆ. ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಯೋಗ ಮಾಡುವವನ ಮನಸ್ಸು, ದೇಹ ಸದಾ ಚೈತನ್ಯಶೀಲವಾಗಿರುತ್ತದೆ. ಜೀವನ ಕೌಶಲ್ಯ ಮತ್ತು ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕು ಎಂದು ಹೇಳಿದರು.
ರಾಷ್ಟçಪ್ರಶಸ್ತಿ ಪುರಸ್ಕೃತ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅವರು ಚೇತನ್‌ರಾಮ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿ ಮಾತನಾಡಿ, ಯೋಗದ ಜೊತೆಗೆ ಜ್ಞಾನದ ಬುತ್ತಿಯನ್ನು ವೃದ್ಧಿಸುವ ಕಾರ್ಯವನ್ನು ನಮ್ಮ ಯೋಗಕೇಂದ್ರ ನಿರಂತರವಾಗಿ ಮಾಡುತ್ತಿದೆ. ಇದರ ಲಾಭವನ್ನು ನಮ್ಮ ಯೋಗಪಟುಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ವೇದಿಕೆಯಲ್ಲಿ ಡಾ. ಗಾಯಿತ್ರಿದೇವಿ ಸಜ್ಜನ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಡಾ. ಪರಿಸರ ನಾಗರಾಜ್, ಕಾಟನ್ ಜಗದೀಶ್, ವಿಜಯ ಬಾಯರ್, ಯೋಗ ಶಿಕ್ಷಕರಾದ ಓಂಕಾರ್, ಹರೀಶ್, ಚಂದ್ರಶೇಖರ್ ಹಾಗೂ ಯೋಗಪಟುಗಳು ಉಪಸ್ಥಿತರಿದ್ದರು.