
ಶಿವಮೊಗ್ಗ : ಸಾಹಿತ್ಯಾತ್ಮಕ ಸೃಜನಶೀಲ ಸಂಘಟನೆಗೆ ಸಾಹಿತ್ಯ ಗ್ರಾಮ ಪೂರಕ ಶಕ್ತಿಯಾಗಿದೆ ಎಂದು ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ ಅಭಿಪ್ರಾಯಪಟ್ಟರು
ಭಾನುವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ 197 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯ ಗ್ರಾಮವೆಂಬುದು ಅದ್ಭುತ ಪರಿಕಲ್ಪನೆ. ಯಾವುದೇ ಸರ್ಕಾರವಾಗಲಿ ಕನ್ನಡ ಪರ ಕಾರ್ಯಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತಿದೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಗ್ರಾಮದ ಮೂಲ ಪರಿಕಲ್ಪನೆ ಪೂರ್ಣಗೊಂಡು ಮತ್ತಷ್ಟು ಕನ್ನಡ ಕಟ್ಟುವ ಕೆಲಸವಾಗಲಿ ಎಂದು ಆಶಿಸಿದರು.

ಸೋಲು ವ್ಯವಸ್ಥೆಗಳಿಂದ ಎದುರಾಗುತ್ತದೆ ಅದರೇ ಕ್ರಿಯಾಶೀಲತೆಯ ಮೂಲಕ ವ್ಯಕ್ತಿತ್ವಗಳ ಗೆಲುವು ಸಾಧ್ಯವಿದೆ ಎಂಬ ಅನೇಕ ಉದಾಹರಣೆಗಳು ನಮ್ಮ ಮುಂದಿದೆ. ಹಾಗಾಗಿಯೇ ಸೋಲು ಮತ್ತು ಗೆಲುವು ಬದುಕಿನ ಸಹಜತೆಯಾಗಿದ್ದು ಸೃಜನಶೀಲತೆಯ ಮೂಲಕ ಎದುರಿಸಬೇಕಿದೆ ಎಂದು ಹೇಳಿದರು.
ಖ್ಯಾತ ವಾಗ್ಮಿ ಸುಧಾ ಬರಗೂರು ಮಾತನಾಡಿ ಕನ್ನಡ ನಾಡಿನಲ್ಲಿ ಕನ್ನಡ ಉಳಿಸಿಕೊಳ್ಳುವ ಆತಂಕಗಳು ಎದುರಾಗುತ್ತಿರುವಾಗ ಸಾಹಿತ್ಯ ಹುಣ್ಣಿಮೆಯಂತಹ ಕ್ರಿಯಾಶೀಲ ಸಂಘಟನೆ ಅಂತಹ ಆತಂಕಗಳನ್ನು ದೂರವಾಗಿಸುತ್ತದೆ. ನಮ್ಮ ಬಾಲ್ಯದ ದಿನಗಳಲ್ಲಿ ಶಾಲೆಗಳಿಗೆ ತೆರಳಲು ಬಡತನದಿಂದಾಗಿ ಬಟ್ಟೆಯ ಸಮಸ್ಯೆಯಿತ್ತು. ಅದರೇ ಇಂದು ಬಟ್ಟೆಯೇ ಶಿಕ್ಷಣದ ಸಮಸ್ಯೆಯಾಗಿದ್ದು ವಿಪರ್ಯಾಸ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರರಾದ ಬಿ.ಟಿ.ಕಾಂತರಾಜ್, ಮಹಾನಗರ ಪಾಲಿಕೆ ಸದಸ್ಯರಾದ ಶಂಕರನಾಯ್ಕ್ , ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕವಿಗಳಾದ ಕೆ.ಆರ್.ಕೃಷ್ಣಮೂರ್ತಿ, ಗಾಯತ್ರಿ ಸುರೇಂದ್ರ, ಕೆ.ಎಸ್.ಮಂಜಪ್ಪ, ಮೇಘನ ಕವನ ವಾಚಿಸಿದರು. ಲತಾ ಶುಭಕರ್ ಕಥೆ ವಾಚಿಸಿದರು. ನಳಿನಾಕ್ಷಿ , ಚೌಡೇಶ್ವರಿ ಮಹಿಳಾ ಭಜನಾ ತಂಡ, ಲಲಿತಮ್ಮ, ಸಂಧ್ಯಾ ಕಾಮತ್ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯದರ್ಶಿ ಎಂ.ಎಂ.ಸ್ವಾಮಿ ಸ್ವಾಗತಿಸಿ, ಕೆ.ಎಸ್.ಅನುರಾಧ ವಂದಿಸಿ, ಬಿ.ಟಿ.ಅಂಬಿಕ ನಿರೂಪಿಸಿದರು.