ಶಿವಮೊಗ್ಗ: ನಗರದ ಶ್ರೀ ಬೆಕ್ಕಿನಕಲ್ಮಠದ ಸ್ಮರಣೋತ್ಸವ ಸಮಿತಿ ವತಿಯಿಂದ ಮಾ.5 ರ ನಾಳೆ ಶ್ರೀ ಬೆಕ್ಕಿನ ಕಲ್ಮಠದ ಗುರುಬಸವ ಭವನದಲ್ಲಿ ಪರಮ ತಪಸ್ವಿ ಲಿಂ|| ಜಗದ್ಗುರು ಶ್ರೀ ಗುರುಬಸವ ಮಹಾ ಸ್ವಾಮಿಗಳವರ 110ನೇ ಪುಣ್ಯ ಸ್ಮರಣೋತ್ಸವ, ಶರಣ ಸಾಹಿತ್ಯ ಸಮ್ಮೇಳನ ಮತ್ತು ಭಾವೈಕ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಮಹಾಸ್ವಾಮೀಜಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಳೆ ಸಂಜೆ 5ಗಂಟೆಗೆ ನಡೆಯುವ ಭಾವೈಕ್ಯ ಸಮ್ಮೇಳನ ಹಾಗೂ ಗುರುಬಸವ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ಡಾ.ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಮಹಾಸ್ವಾಮೀಜಿ, ಸಿರಿಗೆರೆಯ ಶ್ರೀ ಬೃಹನ್ಮಠದ ಶ್ರೀ ಡಾ.ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದು, ಜಿಲ್ಲೆಯ ವಿವಿಧ ಮಠದ ಸ್ವಾಮೀಜಿಗಳು ಉಪಸ್ಥಿತರಿರುವರು ಎಂದರು.ಸಮಾರಂಭವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಅಶೋಕ್ ನಾಯಕ್, ಡಿ.ಎಸ್.ಅರುಣ್, ಮೇಯರ್ ಸುನೀತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ಎನ್.ಜಿ.ನಾಗರಾಜ್, ಎಪಿಎಂಸಿ ಅಧ್ಯಕ್ಷ ಟಿ.ಬಿ.ಜಗದೀಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಶ್ರೀಕಾಂತ್ ಹಾಗೂ ಇನ್ನಿತರರು ಆಗಮಿಸಲಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ನಾಟಕ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ್ಕುಮಾರ್ ಅಭಿನಂದನಾ ಭಾಷಣ ಮಾಡುವರು. ಈ ಸಂದರ್ಭದಲ್ಲಿ ಲೇಖಕ ಡಾ.ಸಿ.ರೇಣುಕಾರಾದ್ಯರವರ ವೀರಶೈವ ಸಿದ್ದಾಂತ ಹಾಗೂ ಜೈನ ದರ್ಶನದ ತೌಲನಿಕ ಅಧ್ಯಾಯನ ಪುಸ್ತಕ ಬಿಡುಗಡೆಯಾಗಲಿದೆ. ಕಾರ್ಯಕ್ರಮದ ನಂತರ ಉದಯೋನ್ಮುಖ ಕಲಾವಿದರಾದ ನೌಷಾದ್ ಹರ್ಲಾಪುರ ಹಾಗೂ ನಿಷಾದ್ ಹರ್ಲಾಪುರ ಇವರಿಂದ ವಚನ ಜುಗಲ್ಬಂದಿ ನಡೆಯಲಿದೆ ಎಂದರು. ಶರಣ ಸಾಹಿತ್ಯ ಮತ್ತು ಭಾವೈಕ್ಯ ಸಮ್ಮೇಳನ ಹಾಗೂ 509ನೇ ಮಾಸಿಕ ಶಿವಾನುಭವಗೋಷ್ಠಿ ಅಂಗವಾಗಿ ಬೆಳಿಗ್ಗೆ 10ಗಂಟೆಯಿಂದ ವಚನ ಕಂಠಪಾಠ, ವಚನಗಾಯನ, ರಂಗೋಲಿ, ಜಿಲ್ಲಾಮಟ್ಟದ ಭಜನೆ ಸ್ಪರ್ಧೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಜೆ.ರಾಜಶೇಖರ್, ಹೆಚ್.ವಿ.ಮಹೇಶ್ವರಪ್ಪ, ಎಸ್.ಎನ್.ಮಹಲಿಂಗಯ್ಯ ಶಾಸ್ತ್ರೀ, ವೈ.ಹೆಚ್.ನಾಗರಾಜ್, ಶಾಂತ ಆನಂದ್, ಪುಷ್ಪ ಹಾಲಪ್ಪ ಉಪಸ್ಥಿತರಿದ್ದರು. ಬಾಕ್ಸ್: ವಿಶ್ವದಲ್ಲಿ ಕಾಡಿದ ಕೊರೋನಾ ಹಾಗೂ ಈಗ ನಡೆಯುತ್ತಿರುವ ರಷ್ಯಾ ಹಾಗೂ ಉಕ್ರೇನ್ ಯುದ್ದದಿಂದಾಗಿ ಜನರು ಜೀವನದಲ್ಲಿ ತೊಂದರೆ ಅನುಭವಿಸುತ್ತಿದ್ದು, ಇದನ್ನು ದಾಟಿ ಮುನ್ನಡೆಯಬೇಕಾಗಿದೆ. ಮತ್ತು ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಶಾಂತಿ ನೆಲಸಬೇಕಾದರೆ ವಿವೇಕವನ್ನು ಬಿತ್ತುವುದರ ಮೂಲಕ ಧಾರ್ಮಿಕ ಕಾರ್ಯಕ್ರಮ ಹೆಚ್ಚಾಗಿ ನಡೆಸಿಕೊಂಡು ಹೋಗಬೇಕಾಗಿದೆ ಎಂದರು.