ಶಿವಮೊಗ್ಗ: ವಿರೋಧ ಪಕ್ಷದವರ ವಿರೋಧ ಹಾಗೂ ಕೂಗಾಟ, ಗದ್ದಲ, ಪ್ರತಿಭಟನೆ ನಡುವೆ ಇಂದು ಮಹಾನಗರ ಪಾಲಿಕೆಯ 2022 -23 ನೇ ಸಾಲಿನ 252.32 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಲಾಯಿತು.
ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆ ಆರಂಭಕ್ಕೂ ಮುನ್ನವೇ ವಿರೋಧ ಪಕ್ಷದವರು ಬೋಗಸ್ ಹಾಗೂ 3 ವರ್ಷದ ಮಾದರಿಯಂತೆ ಬಜೆಟ್ ಮಂಡಿಸಲಾಗುತ್ತಿದ್ದು, ಮಂಡಿಸುವ ಮುನ್ನ ಕಳೆದ ವರ್ಷದ ಬಜೆಟ್ ನಲ್ಲಿ ಉಪಯೋಗಿಸಿದ ಹಣದ ಅನುಪಾಲನಾ ವರದಿಯನ್ನು ನೀಡಲೇಬೇಕು ಎಂದು ವಿಪಕ್ಷದ ನಾಯಕಿ ಮತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂದು ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರ ಕೂಗಾಟ ಹಾಗೂ ಗದ್ದಲದ ನಡುವೆಯೂ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ರವಿಶಂಕರ್ ಅವರು ಯಾವ ಕೂಗಾಟ ಕೇಳಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಬಜೆಟ್ ಮಂಡಿಸಿದರು.
ಪ್ರಮುಖ ಅಂಕಿ ಅಂಶ…
2022 -23 ನೇ ಸಾಲಿನಲ್ಲಿ 28540.04 ಲಕ್ಷ ರೂ. ಆದಾಯ ನಿರೀಕ್ಷಿಸಿದ್ದು, 28287.72 ಲಕ್ಷ ರೂ. ಅಂದಾಜು ವೆಚ್ಚ ನಿರೀಕ್ಷೆ ಮಾಡಿದ್ದು, ಇದರಿಂದಾಗಿ 252.32 ಲಕ್ಷ ರೂ. ಉಳಿತಾಯ ಬಜೆಟ್ ಆಗಿದೆ.ಆದಾಯ ನಿರೀಕ್ಷೆ:ಆಸ್ತಿ ತೆರಿಗೆ. ಪರವಾನಿಗೆ ಶುಲ್ಕ, ಅಭಿವೃದ್ಧಿ ಶುಲ್ಕ, ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಿಗೆ, ಜಾಹೀರಾತು ತೆರಿಗೆ, ಘನತ್ಯಾಜ್ಯ ವಸ್ತು ನಿರ್ವಹಣೆ ತೆರಿಗೆ ಇತರೆ ಎಲ್ಲಾ ಮೂಲಗಳಿಂದ 28540.04 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದೆ.
ಅಂದಾಜು ವೆಚ್ಚಕೆರೆಗಳ ಅಭಿವೃದ್ಧಿಗೆ 1 ಕೋಟಿ ರೂ….
ಸ್ವಚ್ಛತೆಗಾಗಿ ಹೊಸ ಯಂತ್ರ ಹಾಗೂ ಇ –ಶೌಚಾಲಯ ನಿರ್ಮಾಣಕ್ಕೆ 2 ಕೋಟಿ ರೂ. ಸು –ಶಾಸನ ಭವನ ನಿರ್ಮಾಣಕ್ಕೆ 5 ಕೋಟಿ ರೂ., ಒಳಾಂಗಣ ಕ್ರೀಡಾಂಗಣ ಮತ್ತು ಆಟದ ಮೈದಾನಕ್ಕೆ 1 ಕೋಟಿ ರೂ., ಮೀನು ಮತ್ತು ಮಾಂಸ ಮಾರುಕಟ್ಟೆಗೆ 50 ಲಕ್ಷ ರೂ., ಡಾ. ಅಬ್ದುಲ್ ಕಲಾಂ ವಿಶಿಷ್ಟಚೇತನ ಕ್ಷೇಮಾಭಿವೃದ್ಧಿಗೆ 20 ಲಕ್ಷ ರೂ., ಪಂಡಿತ್ ದೀನದಯಾಳ್ ಹೃದಯಸ್ಪರ್ಶಿ ಯೋಜನೆಗೆ 35 ಲಕ್ಷ ರೂ., ಸಾಂಸ್ಕೃತಿಕ ಸುರಕ್ಷಾ ಯೋಜನೆಗೆ 20 ಲಕ್ಷ ರೂ.
ಏಕಲವ್ಯ ಕ್ರೀಡಾ ಯೋಜನೆ ಕ್ರೀಡಾ ಚಟುವಟಿಕೆಗಾಗಿ 10 ಲಕ್ಷ ರೂ…
ಸ್ವಾಮಿ ವಿವೇಕಾನಂದ ಯುವ ಯೋಜನೆ ಹಾಗೂ ಕೆಳದಿ ರಾಣಿ ಚೆನ್ನಮ್ಮ ಮಹಿಳಾ ಯೋಜನೆಗೆ ತಲಾ 25 ಲಕ್ಷ ರೂ., ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆಗೆ 15 ಲಕ್ಷ ರೂ., ಪ್ಲಾಸ್ಟಿಕ್ ಮುಕ್ತ ಶಿವಮೊಗ್ಗಕ್ಕೆ 10 ಲಕ್ಷ ರೂ., ಮೂಲದಲ್ಲೇ ಘನತ್ಯಾಜ್ಯ ವಿಂಗಡಿಸುವುದಕ್ಕೆ 35 ಲಕ್ಷ ರೂ., ಲವ ಕುಶ ಮಕ್ಕಳ ಕಲ್ಯಾಣ ಯೋಜನೆಗೆ 10 ಲಕ್ಷ ರೂ. ಹಾಗೂ ಇತರೆ ಅನುದಾನ ಕಾಯ್ದಿರಿಸಲಾಗಿದೆ. ಸಭೆಯಲ್ಲಿ ಉಪ ಮೇಯರ್ ಶಂಕರ್ ಗನ್ನಿ, ಆಯುಕ್ತ ಮಾಯಣ್ಣಗೌಡ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಇದ್ದರು.