ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ ವಂಚಕರನ್ನು ಪತ್ತೆಹಚ್ಚಿ, ವಂಚಿಸಿದ ತೆರಿಗೆಯನ್ನು ವಸೂಲಿ ಮಾಡುವಲ್ಲಿ ಮಹತ್ವದ ಸಾಧನೆ ತೋರಿದ ಕನ್ನಡಿಗ ಅಧಿಕಾರಿ ಮಹೇಶ್ ಕುಮಾರ್ ಅವರಿಗೆ 2021ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರ ದೊರೆತಿದೆ.

ದಕ್ಷಿಣ ಕೇಂದ್ರೀಯ ತೆರಿಗೆ ಕಮಿಷನರೇಟ್‍ನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವಿಭಾಗದ ಅಧೀಕ್ಷಕರಾಗಿರುವ ಮಹೇಶ್ ಕುಮಾರ್ ಅವರಿಗೆ ಬೆಂಗಳೂರಿನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಮಹೇಶ್ ಕುಮಾರ್ ಅವರು ₹1,380 ಕೋಟಿ ತೆರಿಗೆ ವಂಚನೆಯ 153 ಪ್ರಕರಣಗಳಲ್ಲಿ ₹482 ಕೋಟಿ ವಸೂಲು ಮಾಡಿದ ಸಾಧನೆಗಾಗಿ ಈ ಪುರಸ್ಕಾರ ದೊರೆತಿದೆ.

ದೇಶ ಸೇವೆಯ ಹೆಮ್ಮೆ: “ತೆರಿಗೆ ವಂಚಕರನ್ನು ಪತ್ತೆ ಹಚ್ಚಿ, ವಂಚಿಸಿದ ತೆರಿಗೆಯನ್ನು ದೇಶಕ್ಕೆ ಕೊಡಿಸುವ ಕೆಲಸ ನಿಜವಾದ ದೇಶ ಸೇವೆಗಳಲ್ಲಿ ಒಂದು ಎಂದು ಭಾವಿಸಿದ್ದೇನೆ. ಯಾರ ಹಸ್ತಕ್ಷೇಪವೂ ಇಲ್ಲದೆ, ಯಾರ ಮುಲಾಜಿಗೂ ಒಳಗಾಗದೆ ಕರ್ತವ್ಯ ನಿರ್ವಹಿಸಲು ಅವಕಾಶ ಇರುವುದು ಹೆಮ್ಮೆಯ ಸಂಗತಿ. ಹೀಗಾಗಿಯೇ ಇಂತಹ ಸಾಧನೆ ಮಾಡುವುದು ಸಾಧ್ಯವಾಯಿತು’ ಎಂದು ಮಹೇಶ್ ಕುಮಾರ್ ತಮ್ಮ ಅನುಭವ ಹಂಚಿಕೊಂಡರು.

ಸೋಮವಾರ ನಡೆದ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರ ವಿಜೇತರಾದ ಬೆಂಗಳೂರು ದಕ್ಷಿಣ ಕೇಂದ್ರೀಯ ತೆರಿಗೆ ಕಮಿಷನರೇಟ್‍ನ ಸರಕು ಮತ್ತು ಸೇವಾ ತೆರಿಗೆ ವಿಭಾಗದ ಸೂಪರಿಂಟೆಂಡೆಂಟ್ ಮಹೇಶ್ ಕುಮಾರ್ ಅವರನ್ನು ಸನ್ಮಾನಿಸಿದರು.

ವರದಿ ಮಂಜುನಾಥ್ ಶೆಟ್ಟಿ…