ಶಿವಮೊಗ್ಗ: ರಾಜ್ಯ ಮತ್ತು ಕೇಂದ್ರ ಸರ್ಕಾರ ಬಗರ್ ಹುಕುಂ ಸಾಗುವಳಿದಾರರಿಗೆ ರಕ್ಷಣೆ ಕೊಡಬೇಕು. ನ್ಯಾಯಾಲಯಕ್ಕೆ ಅಲೆದಾಡಿಸಬಾರದು. ಈಗ ರೈತರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಬೇಕು.ಯಾವುದೇ ಕಾರಣಕ್ಕೂ ಒಕ್ಕಲೆಬಿಸಬಾರದು ಎಂದು ಸೊರಬದ ಮಾಜಿ ಶಾಸಕ ಮಧುಬಂಗಾರಪ್ಪ ಹೇಳಿದರು.
ಅವರು ಇಂದು ಕಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಗರ್ಹುಕುಂ ಸಮಸ್ಯೆ ಜೀವಂತವಾಗಿರಲು ಇಂದಿನ ಬಿಜೆಪಿ ಸರ್ಕಾರವೇ ಕಾರಣವಾಗಿದೆ. ಇದು 2006ರ ಸಮಸ್ಯೆಯಲ್ಲ. 2012 ರ ಸಮಸ್ಯೆಯಾಗಿದೆ. ಬಿಜೆಪಿ ಸರ್ಕಾರ ಬಗರ್ಹುಕುಂ ಸಾಗುವಳಿದಾರರನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ಅಧಿಕಾರಿಗಳು ಸೊರಬ ತಾಲೂಕು ಒಂದರಲ್ಲಿಯೇ ಸುಮಾರು 10 ಸಾವಿರಕ್ಕೂ ಹೆಚ್ಚು ಬಗರ್ಹುಕುಂ ಸಾಗುವಳಿದಾರರಿಗೆ ನೋಟಿಸ್ ನೀಡಿದ್ದಾರೆ. ನೂರಾರು ರೈತರು ಬೆಂಗಳೂರಿನ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದಾರೆ. ಜಾಮೀನು ತೆಗೆದುಕೊಳ್ಳಬೇಕು ಎನ್ನುವಷ್ಟರ ಮಟ್ಟಿಗೆ ಬಗರ್ಹುಕುಂ ಸಾಗುವಳಿದಾರರ ಸಮಸ್ಯೆ ಬೆಳೆದು ನಿಂತಿದೆ ಎಂದರು.
ಬಿಜೆಪಿ ಸದಾ ಸುಳ್ಳು ಹೇಳುತ್ತಲೇ ಬಂದಿದೆ. ಸಂಸದ ರಾಘವೇಂದ್ರರಿಗೆ ಬಗರ್ಹುಕುಂ ಸಮಸ್ಯೆಯ ಬಗ್ಗೆ ಏನು ತಿಳಿದೇಇಲ್ಲ. ಸಾವಿರಾರು ಜನರಿಗೆ ಕೇಸು ಹಾಕುತ್ತಿದ್ದರೂ ಕೂಡ ಕಣ್ಣು ಮುಚ್ಚಿಕೊಂಡು ಕುಳಿತ್ತಿದ್ದಾರೆ. ಸಂಸತ್ತಿನಲ್ಲಿ ಈ ಬಗ್ಗೆಯೂ ಚರ್ಚೆಯೂ ಮಾಡಲಿಲ್ಲ. ಆಗಿದ್ದು ಆಯ್ತು. ಈಗಲಾದರೂ ರಾಜ್ಯಸರ್ಕಾರ ಕೇಂದ್ರದ ಮೇಲೆ ಒತ್ತಡ ತಂದು ಬಗರ್ಹುಕುಂ ಸಾಗುವಳಿದಾರರ ರಕ್ಷಣೆಗೆ ನಿಲ್ಲಬೇಕು ಮತ್ತು ಕಾಯ್ದೆಗೆ ತಿದ್ದುಪಡಿ ತರಬೇಕು ಎಂದ ಅವರು, ಡಬಲ್ ಇಂಜಿನ್ ಸರ್ಕಾರ ಇದ್ದರೂ ಕೂಡ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಮತ್ತು ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ಕೆರೆಗಳಿಗೆ ನೀರಿಲ್ಲ…
ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಕೋಟ್ಯಾಂತರ ರೂ. ವೆಚ್ಚ ಮಾಡಿದೆ. ಎಲ್ಲ ಕೆರೆಗಳು ತುಂಬಿವೆ ಎಂದು ಬೊಗಳೆ ಬಿಡುತ್ತಿದ್ದಾರೆ. ಯಾವುದೋ ಒಂದು ಅಥವಾ 2 ಕೆರೆಗೆ ನೀರು ಬಂದಿರಬಹುದು ಅಷ್ಟೆ. ಆದರೆ ಸೊರಬ ತಾಲ್ಲೂಕಿನಲ್ಲಿ ಏತ ನೀರಾವರಿ ಯೋಜನೆಗೆ ಒಳಪಟ್ಟಿರುವ ಸುಮಾರು 66 ಕೆರೆಗಳಿಗೆ ನೀರೇ ಬಂದಿಲ್ಲ. ಪೈಪ್ಗಳು ಇವೆ. ಆದರೆ ಅದರಲ್ಲಿ ನೀರಿಲ್ಲ. ಶಿವಮೊಗ್ಗ ಗ್ರಾಮಾಂತರ ನೀರಾವರಿ ಯೋಜನೆಗಳು ಇದೇ ರೀತಿ ಇದೆ. ಯಾವುದೇ ಕೆರೆಗಳಿಗೂ ನೀರಿಲ್ಲ. ಅನೇಕ ನೀರಾವರಿ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಮಾಡದೆ ಇರುವುದರಿಂದ ಯೋಜನೆಯ ವೆಚ್ಚ ಕೂಡ ಹೆಚ್ಚಿದೆ ಎಂದರು.ವಿದ್ಯುತ್ ಇಲ್ಲ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ನೀಡುತಿತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಅದನ್ನು ನಿಲ್ಲಿಸಲಾಗಿದೆ. ವಿದ್ಯುತ್ ಲೋಡ್ ಶೆಡ್ಡಿಂಗ್ ನಿರಂತರವಾಗಿರುವುದರಿಂದ ರೈತರ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ, ಕೊನೆ ಪಕ್ಷ ದಿನದಲ್ಲಿ 10 ಗಂಟೆ 3 ಫೇಸ್ನಲ್ಲಿ ಸಮರ್ಪಕ ವಿದ್ಯುತ್ ನೀಡಬೇಕು ಮತ್ತು ಸಕಾಲಕ್ಕೆ ರೈತರಿಗೆ ಟ್ರಾನ್ಫಾರಂಗಳನ್ನು ನೀಡಬೇಕು. ಮುಗೂರು, ಮೂಡಿ, ಕಚವಿ ಏತ ನೀರಾವರಿ ಯೋಜನೆಗಳನ್ನು ತುರ್ತಾಗಿ ಮುಗಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ನೆರವಿಗೆ ಬನ್ನಿ…
ರಷ್ಯಾ ಮತ್ತು ಉಕ್ರೇನ್ ಯುದ್ದದ ಸಂದರ್ಭದಲ್ಲಿ ಅಲ್ಲಿ ಮೆಡಿಕಲ್ ಓದುತ್ತಿದ್ದ ಸುಮಾರು 12 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ. ಅವರ ವಿದ್ಯಾಭ್ಯಾಸ ಅರ್ಧಕ್ಕೆ ನಿಂತಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅವರ ನೆರವಿಗೆ ಬರಬೇಕು. ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಭಾರತದಲ್ಲಿಯೇ ಮುಂದುವರೆಸುವಂತೆ ಅನುಕೂಲ ಮಾಡಿಕೊಡಬೇಕು ಮತ್ತು ಉಚಿತ ಶಿಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ಮಾ.14 ರಂದು ಪ್ರತಿಭಟನೆ…
ನಿರಂತರ ವಿದ್ಯುತ್, ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ, ಕೆರೆಗಳಿಗೆ ನೀರು ತುಂಬಿಸುವುದು ಮುಂತಾದ ಸಮಸ್ಯೆಗಳನ್ನು ಇಟ್ಟುಕೊಂಡು ಆನವಟ್ಟಿಯಲ್ಲಿ ಮಾ.14 ರಂದು ಬೆಳಿಗ್ಗೆ 10.30 ಕ್ಕೆ ವಿಠಲ ದೇವಸ್ಥಾನದಿಂದ ಮೆಸ್ಕಾಂ ಕಚೇರಿಯವರೆಗೆ ಬೃಹತ್ ರೈತ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಪಕ್ಷ ಸಂಘಟನೆ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಲು ಎಲ್ಲಾ ಕಾಂಗ್ರೆಸ್ ಹಿರಿಯ, ಕಿರಿಯ ಮುಖಂಡರೊಡನೆ ಸೇರಿ ಹೋರಾಟದ ಮೂಲಕವೇ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಜನರಿಗೆ ತಿಳಿಸುತ್ತಾ ಪಕ್ಷವನ್ನು ಮತ್ತಷ್ಟು ಸಂಘಟಿಸಲಾಗುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಒಗ್ಗಟ್ಟಿನ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಜಿಲ್ಲಾ ಕಾಂಗ್ರೆಸ್ನಲ್ಲಿ ಹಲವು ಗುಂಪುಗಳಾಗಿವೆ. ಇದು ಪಕ್ಷದ ಸಂಘಟನೆಗೆ ಅಡ್ಡಿ ಆಗುತ್ತದೆ ಅಲ್ಲವೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ನಿಜ ಈ ಬಗ್ಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಮಾಜಿ ಅಧ್ಯಕ್ಷರು, ಮಾಜಿ ಶಾಸಕರು, ಹಿರಿಯರು ಸೇರಿಕೊಂಡು ಒಟ್ಟಾಗಿ ಸಂಘಟನೆಯ ಮೂಲಕ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್, ಆರ್. ಪ್ರಸನ್ನಕುಮಾರ್, ಆರ್.ಸಿ. ಪಾಟೀಲ್, ಯು.ಶಿವಾನಂದ್ ಶೆಟ್ಟಿ, ಶ್ರೀಧರ್ ಹುಲ್ತಿಕೊಪ್ಪ, ಜಿ.ಡಿ.ಮಂಜುನಾಥ್, ಡಾ.ಶ್ರೀನಿವಾಸ ಕರಿಯಣ್ಣ, ವೈ.ಹೆಚ್. ನಾಗರಾಜ್, ಪ್ರವೀಣ್ ಮುಂತಾದವರಿದ್ದರು.