ಶಿವಮೊಗ್ಗ : ನಗರದ ಜೆ.ಎನ್.ಸಿ.ಸಿ.ಇ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಕೌಟುಂಬಿಕವಾಗಿ ಹಾಗೂ ಸಾರ್ವಜನಿಕವಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಯನ್ನು ಸಾಧಿಸುವ ಶಕ್ತಿ ಮಹಿಳೆಗಿದೆ ಎಂದು ಬೊಮ್ಮನಕಟ್ಟೆ ನಗರ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯಾಧಿಕಾರಿ ಡಾ.ಉಮಾ.ಹೆಚ್.ಎಂ ಅಭಿಪ್ರಾಯಪಟ್ಟರು.
ಬುಧವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲಿ ತಂದೆ ತಾಯಿಯ ಪಾತ್ರ ಬಹುಮುಖ್ಯ ಪಾತ್ರ. ಶಿವನು ಅರ್ಧನಾರಿಶ್ವರನಾದ ಕಥನವು ನಮ್ಮಲ್ಲಿ ಸ್ತ್ರೀ ಪುರುಷ ಎರಡೂ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಆದರ್ಶವನ್ನು ತಿಳಿಸುತ್ತದೆ. ಆಗ ಮಾತ್ರ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ. ಹೆಣ್ಣು ತನ್ನ ಮಕ್ಕಳ ನಡೆ ನುಡಿಯನ್ನು ತಾಯಿಯಾಗಿ ಕಲಿಸಿಕೊಡುತ್ತಾಳೆ. ಆಕೆಯ ಕಾಳಜಿ, ಸಂಯಮ ಎಲ್ಲವನ್ನು ಎದುರಿಸುವ ವಿಶ್ವಾಸವನ್ನು ಮಕ್ಕಳಲ್ಲಿ ತುಂಬುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ರುಕ್ಮಿಣಿ ವೇದವ್ಯಾಸ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ವರ್ಷಾ.ಡಿ.ವಿ, ಸುಭಿಷ್ನಾ, ಆಶಾ ಕಾರ್ಯಕರ್ತೆಯರಾದ ಹೆಚ್.ಸಿ.ಆಶಾ, ಅನಿತಾ, ಕಾಲೇಜಿನ ನಿವೃತ್ತ ಸಿಬ್ಬಂದಿ ಸುನಿತಾ.ಎನ್.ಪಿ, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಂ.ಪೂರ್ಣಿಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.