ಶಿವಮೊಗ್ಗ: ಕನ್ನಡದ ಕಣ್ಮಣಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಇಂದು
ನಗರದ ಎಲ್ಲೆಡೆ ಸಡಗರ – ಸಂಭ್ರಮಗಳಿಂದ ಅಭಿಮಾನಿಗಳು ಆಚರಿಸಿದರು.

ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ‘ಜೇಮ್ಸ್’ ಇಂದು ತೆರೆ ಕಂಡಿದ್ದು, ನಗರದ
ಭಾರತ್ ಚಿತ್ರಮಂದಿರ, ಹೆಚ್.ಪಿ.ಸಿ. ಹಾಗೂ ಲಕ್ಷ್ಮೀ ಚಿತ್ರಮಂದಿರಗಳಲ್ಲಿ ಪ್ರದರ್ಶನ
ಕಾಣುತ್ತಿದ್ದು, ಎಲ್ಲ ಕಡೆಯಲ್ಲೂ ಹೌಸ್ ಫುಲ್ ಆಗಿತ್ತು. ಕಳೆದ ಒಂದು ವಾರದಿಂದಲೇ
ಅಭಿಮಾನಿಗಳು ಚಿತ್ರಮಂದಿರಗಳ ಎದುರು ಹಾಗೂ ನಗರದಾದ್ಯಂತ ಪುನೀತ್ ರಾಜ್ ಕುಮಾರ್ ಅವರ
ಕಟೌಟ್ ಗಳನ್ನು ಹಾಕಿದ್ದರು.

ಭಾವುಸಾರ ಮಿಷನ್ ಸಂಸ್ಥೆಯ ಪ್ರೇರಣಾ ಘಟಕದ ವತಿಯಿಂದ ಪುನೀತ್ ರಾಜ್ ಕುಮಾರ್ ಅವರ
ಜನ್ಮದಿನದ ಅಂಗವಾಗಿ ಖ್ಯಾತ ಕಲಾವಿದ ಹರೀಶ್ ಕುಮಾರ್ ಅವರು ಸಿಟಿ ಸೆಂಟರ್ ನ ಭಾರತ್
ಸಿನಿಮಾ ಹಾಲ್ ನ ಮುಂಭಾಗದಲ್ಲಿ ಪುನೀತ್ ರಾಜ್ ಅವರ ಭಾವಚಿತ್ರದ ದೊಡ್ಡ ರಂಗೋಲಿಯನ್ನು
ಬಿಡಿಸಿ ತಮ್ಮ ಅಭಿಮಾನವನ್ನ ಮೆರೆದರು.

ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳ ನಿಗಮದ ಎಸ್. ದತ್ತಾತ್ರಿ ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿದರು. ಕಲಾವಿದ ಹರೀಶ್, ವಿಜಯಕುಮಾರ್, ಎನ್. ವೆಂಕಟೇಶ್, ಸಂತೋಷ್, ಗಜೇಂದ್ರ ಸೇರಿದಂತೆ ಹಲವರಿದ್ದರು.

ಎಪಿಎಂಸಿಯಲ್ಲಿ ತರಕಾರಿ ವರ್ತಕರು ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು
ಸಂಭ್ರಮದಿಂದ ಆಚರಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗಾಂಧಿ ಬಜಾರ್ ನಲ್ಲೂ ಕೂಡ
ವರ್ತಕರು ಪುನೀತ್ ಹುಟ್ಟುಹಬ್ಬವನ್ನು ಲಾಡು, ಪಲಾವು ಹಂಚುವ ಮೂಲಕ ಆಚರಿಸಿದರು.
ಮಧ್ಯಾಹ್ನ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಹೆಚ್.ಪಿ.ಸಿ. ಚಿತ್ರಮಂದಿರದ ಎದುರು ಅಭಿಮಾನಿಗಳು ಪಲಾವು ಹಂಚಿ ಹುಟ್ಟು ಹಬ್ಬ
ಆಚರಿಸಿದರು. ಜೇಸಿಐ ಶಿವಮೊಗ್ಗ ಶರಾವತಿ ಸಂಸ್ಥೆ ನೇತ್ರದಾನ ಶಿಬಿರ, ಆರೋಗ್ಯ ಶಿಬಿರ,
ಗಿಡ ನೆಡುವುದು, ಪರಿಸರ ಜಾಗೃತಿ ಜಾಥಾ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿದರು.

ಒಟ್ಟಾರೆ ಇಡೀ ಶಿವಮೊಗ್ಗ ನಗರ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬವನ್ನು ಸಂಭ್ರಮದಿಂದ
ಆಚರಿಸಿದ್ದು ಕಂಡುಬಂದಿತು. ಅಪ್ಪುವಿಗೆ ಕರ್ಪೂರ ಹಚ್ಚಿ ಪೂಜಿಸಿದರು. ಕಟೌಟ್ ಗೆ
ನಮಸ್ಕಾರ ಮಾಡಿದರು. ಬ್ಯಾನರ್ ಗಳನ್ನು ನಗರದ ತುಂಬಾ ಕಟ್ಟಿದರು. ಈಡುಗಾಯಿ ಒಡೆದರು.
ಹೀಗೆ ತಮ್ಮ ಅಭಿಮಾನವನ್ನು, ಸಂಭ್ರಮವನ್ನು ಮೆರೆದರು. ಕೆಲವರು ಕಣ್ಣೀರಿಟ್ಟರು ಕೂಡ.

ಅಪ್ಪು ಹುಟ್ಟುಹಬ್ಬದಂದೇ ಬಿಡುಗಡೆಯಾದ ಜೇಮ್ಸ್ ಚಿತ್ರ ನೋಡಲು ಅಭಿಮಾನಿಗಳು
ರಾತ್ರಿಯಿಂದಲೇ ಚಿತ್ರಮಂದಿರಗಳ ಬಳಿ ನೆರೆದಿದ್ದರು. ಮೊದಲ ಪ್ರದರ್ಶನ ಬೆಳಿಗ್ಗೆ
5.30ಕ್ಕೆ ಕಂಡಿದ್ದು, ಚಿತ್ರ ನೋಡಿದ ಅಪ್ಪು ಅಭಿಮಾನಿಗಳು ಚಿತ್ರಕ್ಕೆ ಮೆಚ್ಚುಗೆ
ವ್ಯಕ್ತಪಡಿಸಿದ್ದಲ್ಲದೆ, ಕಣ್ಣೀರಿಟ್ಟಿದ್ದೂ ಕಂಡುಬಂತು.

ವರದಿ ಮಂಜುನಾಥ್ ಶೆಟ್ಟಿ…