ಶಿವಮೊಗ್ಗ: ಮನೆಗಳಿಗೆ ನಿರಂತರ ಜ್ಯೋತಿ ಹಾಗೂ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಲು ಒತ್ತಾಯಿಸಿ ಇಂದು ಶಿವಮೊಗ್ಗ ತಾಲ್ಲೂಕು ಸೋಗಾನೆ ಹಾಗೂ ಕೊರಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರು ಹಾಗೂ ಮುಖಂಡರು ಮೆಸ್ಕಾಂಗೆ ಮನವಿ ಸಲ್ಲಿಸಿದರು.
ಈ ವೇಳೆ ಕಾರ್ಯ ನಿರ್ವಾಹಕ ಎಂಜಿನಿಯರ್ ವೀರೇಂದ್ರ ಅವರನ್ನು ಭೇಟಿ ಮಾಡಿ ಮಾತನಾಡಿದ ಮುಖಂಡರು, ‘ಸೋಗಾನೆ ಹಾಗೂ ಕೊರಲಹಳ್ಳಿ ಗ್ರಾಮ ಪಂಚಾಯಿತಿ ಭಾಗದ ಜನರೊಟ್ಟಿಗೆ ವಿದ್ಯುತ್ ಪ್ರತಿನಿತ್ಯ ಕಣ್ಣಮುಚ್ಚಾಲೆ ಆಡುತ್ತಿದೆ. ಇದರಿಂದ ಈ ಭಾಗದ ರೈತರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳಿಗೆ ಇದೀಗ ಎಲ್ಲೆಡೆ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯುತ್ ಸಮಸ್ಯೆಯಿಂದಾಗಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ. ಅಲ್ಲದೆ ಪಂಪ್ಸೆಟ್ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರ ಸ್ಥಿತಿ ಡೋಲಾಯಮಾನವಾಗಿದೆ ಎಂದು ತಿಳಿಸಿದರು.
ಸೋಗಾನೆ ಹಾಗೂ ಕೊರಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಹಳ್ಳಿಗಳು ಪ್ರತಿಷ್ಠಿತ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿದ್ದು, ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜ್ಯೋತಿನಗರ, ವಿನಾಯಕನಗರ, ಹಾರೇಕಟ್ಟೆ, ಕಾಚಿನಕಟ್ಟೆ, ಕೊರಲಹಳ್ಳಿ, ದೊಡ್ಡಿಬೀಳು, ಲಕ್ಕಿನಕೊಪ್ಪ ಹಾಗೂ ಸುತ್ತಮುತ್ತಲಿನ ಹಳ್ಳಿಗಳನ್ನು ನಿರಂತರ ಜ್ಯೋತಿ ವ್ಯಾಪ್ತಿಗೆ ಒಳಪಡಿಸಬೇಕು’ ಎಂದು ಒತ್ತಾಯಿಸಿದರು.ಸಕರಾತ್ಮಕ ಸ್ಪಂದನೆ: ರೈತರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಕಾರ್ಯ ನಿರ್ವಾಹಕ ಎಂಜಿನಿಯರ್ ವೀರೇಂದ್ರ ಅವರು ‘ಪ್ರಸ್ತುತ ಸಂಜೆ 6 ರಿಂದ ಬೆಳಿಗ್ಗೆ 10 ರವರೆಗೆ ನೀಡುತ್ತಿರುವ ವಿದ್ಯುತ್ ನ್ನು ಮಧ್ಯಾಹ್ನ 1 ರವರೆಗೆ ನೀಡಲು ಕ್ರಮ ಕೈಗೊಳ್ಳಲಾಗುವುದು.
ಅಲ್ಲದೇ ಈ ಭಾಗದಲ್ಲಿ ಹೆಚ್ಚುವರಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರಂತರ ಜ್ಯೋತಿ ಕಾಮಗಾರಿ ನಡೆಯಬೇಕಾಗಿದ್ದು, ಈ ಬಗ್ಗೆ ಕ್ರಮವಹಿಸಿ ಈ ಭಾಗದ ಬಹುತೇಕ ಹಳ್ಳಿಗಳಿಗೆ ನಿರಂತರ ಜ್ಯೋತಿ ನೀಡಲಾಗುವುದು’ ಎಂದು ತಿಳಿಸಿದರು.ಈ ವೇಳೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪಾಲಾಕ್ಷ, ಪಿಎಲ್ಡಿ ಬ್ಯಾಂಕ್ನ ಉಪಾಧ್ಯಕ್ಷರಾದ ಆರ್.ವಿಜಯಕುಮಾರ್, ಸೋಗಾನೆ ಗ್ರಾ.ಪಂ ಮಾಜಿ ಅಧ್ಯಕ್ಷ ಅನಿಲ್ ಸಾಗರ್, ಕೊರಲಹಳ್ಳಿ ಗ್ರಾ.ಪಂ ಸದಸ್ಯ ಜನಾರ್ಧನ್, ಮುಖಂಡರಾದ ಅರುಣ್ ನಾಯ್ಡು, ತಂಗವೇಲು, ಕೇಶವ, ಮಂಜಣ್ಣ, ಗಣೇಶ್, ವೀರಭದ್ರ, ಪುಟ್ಟರಾಜು, ಕೃಷ್ಣಪ್ಪ ಮತ್ತಿತರರು ಇದ್ದರು.