ಸಂಪಾದಕೀಯ :

ಪ್ರಧಾನ ಮಂತ್ರಿಗಳ ಕನಸಿನ ಕೂಸಾದ ಸ್ವಚ್ಚ ಭಾರತ ಅಭಿಯಾನ ದೇಶಾದ್ಯಂತ ಸಂಚಲನ ಮೂಡಿಸಿದ ಅಭಿಯಾನ.ಈ ಸ್ವಚ್ಛ ಭಾರತ್ ಮಿಷನ್ ನಲ್ಲಿ ಅದೆಷ್ಟೋ ಅನುದಾನಗಳು ಜಿಲ್ಲಾಡಳಿತಗಳಿಗೆ ಹರಿದುಬಂದಿದೆ. ಶಿವಮೊಗ್ಗ ನಗರದಲ್ಲೂ ಕೂಡ ಅತ್ಯಂತ ಸುಸಜ್ಜಿತ ಕಸ ವಿಲೇವಾರಿ ವಾಹನಗಳಿವೆ. ಅಲ್ಲದೆ ಹೊಸದಾಗಿ ಬ್ಯಾಟರಿ ಚಾಲಿತ ಕಸ ವಿಲೇವಾರಿ ವಾಹನಗಳು ಬಂದಿಳಿದಿವೆ.

ಇಲ್ಲೊಂದು ಬೇಸರದ ಸಂಗತಿ ಏನೆಂದರೆ ಶಿವಮೊಗ್ಗ ನಗರದ ಅನೇಕ ಭಾಗಗಳಲ್ಲಿ ಅನುದಾನಗಳನ್ನು ಬಳಸಿಕೊಂಡು ಶೌಚಾಲಯಗಳನ್ನು ನಿರ್ಮಿಸಲಾಗಿದೆ ಆದರೆ ಅವಕ್ಕೆಲ್ಲ ಬೀಗ ಹಾಕಿ ಇಡಲಾಗಿದೆ. ಇದು ಮಹಾನಗರ ಪಾಲಿಕೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಗೆ ಹಿಡಿದ ಕೈಗನ್ನಡಿಯಾಗಿದೆ. ಶೌಚಾಲಯಗಳು ಬೀಗ ಹಾಕಿರುವುದರಿಂದ ಜನರು ಮೂತ್ರ ವಿಸರ್ಜನೆಯನ್ನು ಕಂಡಕಂಡಲ್ಲಿ ಮಾಡುತ್ತಿದ್ದು ನಗರದ ನೈರ್ಮಲ್ಯ ಹಾಳಾಗುತ್ತಿದೆ. ಅನೇಕ ಸಂಘಟನೆಗಳು ಈ ಬಗ್ಗೆ ಲಿಖಿತವಾಗಿ ಆಯುಕ್ತರಿಗೆ ದೂರು ನೀಡಿದರೂ ಕೂಡ ಮಹಾನಗರ ಪಾಲಿಕೆ ಕ್ಯಾರೆ ಎನ್ನುತ್ತಿಲ್ಲ.

ಶಿವಮೊಗ್ಗ ನಗರದ ಹೃದಯ ಭಾಗಗಳಲ್ಲಿ ಅನೇಕ ವಾಣಿಜ್ಯ ಮಳಿಗೆಗಳಿದ್ದು ಎಲ್ಲದರಲ್ಲೂ ಕೂಡ ಶೌಚಾಲಯ ವ್ಯವಸ್ಥೆ ಇಲ್ಲ ಇಲ್ಲಿ ಕೆಲಸಕ್ಕೆ ಬರುವ ಅನೇಕ ಹೆಣ್ಣು ಮಕ್ಕಳ ಕಷ್ಟ ಹೇಳತೀರದು. ಮಹಾನಗರ ಪಾಲಿಕೆಗೆ ಮಾತ್ರ ಇದ್ಯಾವುದೂ ಕಾಣುವುದೇ ಇಲ್ಲ. ತಕ್ಷಣ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಇರುವ ಅವ್ಯವಸ್ಥೆಗಳನ್ನು ಸರಿಪಡಿಸಿ ಬೀಗ ಹಾಕಿರುವ ಶೌಚಾಲಯಗಳನ್ನು ಸಾರ್ವಜನಿಕರಿಗೆ ಉಪಯೋಗಿಸಲು ಅನುವು ಮಾಡಿಕೊಡಬೇಕು. ಉದ್ದುದ್ದ ಭಾಷಣ ಬಿಗಿಯುವ ರಾಜಕೀಯ ಮುಖಂಡರುಗಳು ಕೂಡ ಇಂಥ ಕೆಲಸಗಳಿಗೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಈ ಲೇಖನ ಓದಿದ ಮೇಲಾದರೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುತ್ತಾರೆಂಬ ಭರವಸೆ ಮೇಲೆ.

ನೂತನ್ ಮೂಲ್ಯ
ಸಂಪಾದಕರು
ಪ್ರಜಾಶಕ್ತಿ…