ಶಿವಮೊಗ್ಗ : ಸರ್ಕಾರಿ ಶಾಲೆಗಳು ಸಧೃಡವಾಗಿ ಸಮಾಜಕ್ಕೆ ತೆರೆದುಕೊಳ್ಳಲು ಉತ್ತಮ ಅಭಿವೃದ್ದಿ ಯೋಜನೆಗಳೊಂದಿಗೆ ಸರ್ಕಾರ ಹೆಚ್ಚು ಗಮನಕೊಡಬೇಕಾದ ಅನಿವಾರ್ಯತೆಯಿದೆ ಎಂದು ಶಿವಮೊಗ್ಗ ರೋಟರಿ ಕ್ಲಬ್ ಅಧ್ಯಕ್ಷರಾದ ಕಿಶೋರ್ ಶೀರನಾಳಿ ಹೇಳಿದರು.
ಶುಕ್ರವಾರ ತಮ್ಮ ತಾಯಿ ಶ್ರೀಮತಿ ಮುಕಾಂಬಿಕಾ ಅವರ 82 ನೇ ಜನ್ಮ ದಿನದ ಪ್ರಯುಕ್ತ ಕುಂಸಿ ಸರ್ಕಾರಿ ಶಾಲೆಗೆ ಐದು ಗ್ರೀನ್ ಬೋರ್ಡ್ ಹಾಗೂ ಮಕ್ಕಳಿಗೆ ಸಣ್ಣಕಥೆಗಳ ಪುಸ್ತಕ ವಿತರಿಸಿ ಮಾತನಾಡಿದ ಅವರು ಕುಂಸಿ ಸರ್ಕಾರಿ ಶಾಲೆ ಮುಂದಿನ ವರ್ಷ ಶತಮಾನೋತ್ಸವದತ್ತ ದಾಪುಗಾಲು ಇಡುತ್ತಿದೆ. ಈ ಹಿನ್ನಲೆಯಲ್ಲಿ ಶಾಲೆಗೆ ಸಂಪೂರ್ಣ ಹೊಸ ರೂಪ ನೀಡಬೇಕಾದ ಅನಿವಾರ್ಯತೆಯಿದೆ. ಪ್ರಸ್ತುತ ಶಾಲೆಯ ಮೂಲ ಸಂಪನ್ಮೂಲ ವ್ಯವಸ್ಥೆ ಸಂಪೂರ್ಣ ಶೋಚನೀಯವಾಗಿದ್ದು ಸರ್ಕಾರ ಈ ಕುರಿತಾಗಿ ಹೆಚ್ಚು ಗಮನ ಹರಿಸುವಂತೆ ಮನವಿ ಮಾಡಿದರು.
ಕುಂಸಿಯ ಭಗತ್ ರೋಟರಿ ಕ್ಲಬ್ ಶಾಲೆಯ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡುತ್ತಿದ್ದು ಅವರ ಕಾಳಜಿ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ರೋಟರಿ ಕ್ಲಬ್ ಕಾರ್ಯದರ್ಶಿ ರೋ.ಆನಂದ್, ನಿಯೋಜಿತ ಸಹಾಯಕ ಗೌರ್ನರ್ ರೋ.ಸುನಿತಾ ಶ್ರೀಧರ್, ಮಾಜಿ ಸಹಾಯಕ ಗೌರ್ನರ್ ರೋ.ಎನ್.ಎಸ್.ಶ್ರೀಧರ್, ಇಂಟರ್ಯಾಕ್ಟ್ ಛೇರ್ಮನ್ ಎನ್.ಜಿ.ಉಷಾ, ರೋ.ಅನುರಾಧ ಶೀರನಾಳಿ, ಕುಂಸಿಯ ಭಗತ್ ರೋಟರಿ ಕ್ಲಬ್ ಅಧ್ಯಕ್ಷರಾದ ನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.