ಶೀರ್ಷಿಕೆ:
# ಯುಗದ ಆದಿ…..
ಯುಗ ಯುಗಗಳು ಕಳೆದು
ನವಯುಗವು ಬಂದಿದೆ..
ನವ ಚಿಗುರು..ನವ ಸೊಬಗು
ಹೊತ್ತು ಭೂರಮೆ ನಳನಳಿಸಿದೆ.
ಮಾಗಿಯ ಕಾಲದಿ ಎಲೆಗಳೆಲ್ಲಾ
ಉದುರುದುರಿ…
ಚೈತ್ರದ ಚಿಗುರಿಂದ ಮಾವು ಬೇವೆಲ್ಲಾ
ಹಚ್ಚ ಹಸಿರಿನಿಂದ …..
ಮೈತುಂಬಿಕೊಂಡಿದೆ
ಮೊದಲ ಮಳೆಯ ಸಿಂಚನದಿ
ವಸುಧೆ ಗೆ ಜೀವಕಳೆ ಬಂದಿದೆ..
ಸಿಹಿ ಕಹಿಯನ್ನು ಸಮನಾಗಿ
ಕಾಣಲೆಂದು ನೆನಪಿಸಲು
ಬೇವು ಬೆಲ್ಲ ಬೆರೆಸಿ ತಿನ್ನಿರೆಂದು
ಯುಗದ ಆದಿಯು ಮತ್ತೆ ಬಂದಿದೆ..
ತಳಿರು ತೋರಣದಿ ಸಿಂಗರಿಸಿ
ಹೋಳಿಗೆ ಹೂರಣವ ಸವಿದು
ಬಣ್ಣ ಬಣ್ಣದಿ ರಂಗೇರಿಸಿಕೊಂಡು
ಬಿದಿಗೆ ಚಂದ್ರನ ಕಾಣಲು
ಹರುಷದಿ ಯುಗಾದಿಯು ಬಂದಿದೆ…
ಅಂತರಂಗದ ಕೊಳೆಯ ತೊಳೆದು
ಜೀವಕಳೆಯ ತುಂಬಿಕೊಂಡು
ಹೊಂಗನಸ ಹೊತ್ತುಕೊಂಡು
ಪ್ರಕೃತಿಯಂತೆ ಸಾಗಬೇಕಿದೆ
ಮತ್ತೆ ಯುಗದ ಆದಿಗೆ..
ನವ ನಾವೀನ್ಯ.. ನವ ಚೈತನ್ಯ
ಎಲ್ಲೆಡೆಯೂ..ಎಲ್ಲರಲ್ಲಿಯೂ ಮೂಡಲೆಂದು..
ಶುಭಕೃತ ಸಂವತ್ಸರವು….
ಯುಗದ ಆದಿಗೆ ಕಾಲಿಟ್ಟಿದೆ..