ಶಿವಮೊಗ್ಗ: ಇಡೀ ಬಿಜೆಪಿ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಭ್ರಷ್ಟಾಚಾರವನ್ನೇ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್ ತನ್ನ ಹೋರಾಟವನ್ನು ನಿರಂತರವಾಗಿ ಮುಂದುವರೆಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಶೇ. 40 ರ ಕಮಿಷನ್ ಕೇವಲ ಈಶ್ವರಪ್ಪ ಮಾತ್ರ ಅಲ್ಲ, ಅನೇಕ ಬಿಜೆಪಿ ಶಾಸಕರು ಇದರಲ್ಲಿ ಶಾಮೀಲಾಗಿದ್ದಾರೆ. ಸಚಿವರಾದ ಸುಧಾಕರ್, ಆರ್. ಅಶೋಕ್, ಬಿ.ಸಿ. ಪಾಟೀಲ್, ಕೆ. ಗೋಪಾಲಯ್ಯ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕ ಸಿ.ಟಿ. ರವಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಆಯಾ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೂ ಪತ್ರ ಬರೆದಿದ್ದಾರೆ. ಇಷ್ಟಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮಗೇನೂ ಗೊತ್ತಿಲ್ಲ ಎಂದು ಭ್ರಷ್ಟ ಸಚಿವರನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದರು.ಸಚಿವ ಬಿ.ಸಿ. ಪಾಟೀಲ್ ಕೃಷಿ ಇಲಾಖೆಯಲ್ಲಿ ನಡೆದ ಕಾಮಗಾರಿಗಳಲ್ಲಿ ಶೇ. 40 ರಷ್ಟು ಲಂಚ ಕೇಳುತ್ತಿದ್ದಾರೆ ಎಂಬ ಮಾಹಿತಿ ಇದೆ. ಅಶೋಕ್ ಅವರ ಕಂದಾಯ ಇಲಾಖೆಯಲ್ಲೂ ಲಂಚದ ವಾಸನೆ ಬಂದಿದೆ. ಸುಧಾಕರ್ ಕೂಡ ಇದಕ್ಕೆ ಹೊರತಾಗಿಲ್ಲ. ಹೀಗೆ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಸರ್ಕಾರವೇ ಎದ್ದು, ಲಂಚದಲ್ಲಿ ಮುಳುಗಿದೆ ಎಂದರು.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪನವರು ಕೇವಲ ರಾಜೀನಾಮೆ ಕೊಟ್ಟರೇ ಸಾಲದು, ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು. ಸಂತೋಷ್ ಪಾಟೀಲ್ ಯಾರೆಂದು ಗೊತ್ತೇ ಇಲ್ಲ ಎಂದು ಅವರು ಹೇಳಿದ್ದರು. ಬಿಜೆಪಿ ನಾಯಕರುಗಳೇ ಅವರು ಕಾಮಗಾರಿ ಮಾಡಿದ್ದು ನಿಜ ಎಂದು ಒಪ್ಪಿಕೊಳ್ಳುತ್ತಿದ್ದಾರೆ. ಇದಕ್ಕೆ ಶಂಕುಸ್ಥಾಪನೆ, ಕಾಮಗಾರಿ ಉದ್ಘಾಟನೆಯ ಫೋಟೋಗಳು ಕೂಡ ಸಾಕ್ಷಿಯಾಗಿವೆ ಎಂದರು.ಈಶ್ವರಪ್ಪ ಕೋಮುವಾದಿ ಎನ್ನುವುದು ಸ್ಪಷ್ಟವಾಗಿದೆ. ಹರ್ಷನ ಕೊಲೆಯ ನಂತರ ನಡೆದ ಮತ್ತೊಂದು ಕೊಲೆಯ ಸಂಚು ಇದೀಗ ಬಯಲಾಗಿದೆ. ಪೊಲೀಸರ ಮುಂಜಾಗ್ರತೆಯಿಂದ ಮುಸ್ಲಿಂ ಯುವಕನೊಬ್ಬನ ಕೊಲೆ ತಪ್ಪಿದೆ. ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ನಿರ್ವಹಿಸಿದೆ. ಕೊಲೆ ಸಂಚಿನ ಹಿನ್ನಲೆಯಲ್ಲಿ 13 ಮಂದಿ ಆರೋಪಿಗಳಿದ್ದು, ಈಗಾಗಲೇ 10 ಜನರನ್ನು ಕೂಡ ಬಂಧಿಸಲಾಗಿದೆ. ಮುಖ್ಯವಾಗಿ ಹರ್ಷ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಸಚಿನ್ ರಾಯ್ಕರ್ ಕೂಡ ಕೊಲೆ ಯತ್ನ ಪ್ರಕರಣದ ಆರೋಪಿತನಾಗಿದ್ದಾನೆ ಎಂದರು.
ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಶಿವಮೊಗ್ಗದಲ್ಲಿ ನಡೆದ ಕೊಲೆ ಸಂಚಿನ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಮತ್ತಷ್ಟು ಪ್ರಚೋದನೆಯನ್ನು ಬಿಜೆಪಿ ನಾಯಕರು ಮಾಡುತ್ತಲೇ ಬಂದಿದ್ದಾರೆ. ಮುಂದಿನ ಚುನಾವಣೆಯಷ್ಟರಲ್ಲಿ ಶಿವಮೊಗ್ಗದಲ್ಲಿ ಏನು ಬೇಕಾದರೂ ನಡೆಯಬಹುದು. ಮುಖ್ಯಮಂತ್ರಿಗಳು ಈ ಬಗ್ಗೆ ತಮ್ಮ ಪಕ್ಷದ ನಾಯಕರುಗಳಿಗೆ ಎಚ್ಚರಿಕೆ ನೀಡಬೇಕು ಎಂದ ಅವರು, ಹರ್ಷ ಕೊಲೆ ನಂತರ ವಿವಿಧ ಕಾರಣಕ್ಕಾಗಿ ಶಿವಮೊಗ್ಗದಲ್ಲಿ 13 ಕೊಲೆಗಳು ನಡೆದಿವೆ. ಶಾಂತಿ, ಸುವ್ಯವಸ್ಥೆ ಹಾಳಾಗಿದೆ ಎಂದು ಟೀಕಿಸಿದರು.
ಪ್ರತಿಭಟನೆ…
ಬಿಜೆಪಿ ಸರ್ಕಾರ ಲಂಚಾವತಾರ, ಬೆಲೆ ಏರಿಕೆ, ಕೋಮುವಾದ ಮುಂತಾದ ವಿಷಯಗಳನ್ನು ಇಟ್ಟುಕೊಂಡು ಏ. 23 ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ನಾಯಕರು ಭಾಗವಹಿಲಿದ್ದಾರೆ. ಅಂದು ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಯಮುನಾ ರಂಗೇಗೌಡ, ರೇಖಾ ರಂಗನಾಥ್, ಹೆಚ್.ಸಿ. ಯೋಗೀಶ್, ಕೆ. ರಂಗನಾಥ್, ಚಂದ್ರಶೇಖರ್, ಎನ್.ಟಿ. ಕುಮಾರ್, ಮೊಹಮ್ಮದ್ ಇಕ್ಬಾಲ್ ನೇತಾಜಿ, ಕೃಷ್ಣಪ್ಪ ಇದ್ದರು.