ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬ ಸ್ಟೇಟಸ್ ನಲ್ಲಿ ಏನೋ ಫೋಟೋ ಹಾಕಿದ ಎನ್ನುವ ಕಾರಣಕ್ಕೆ ಆತನನ್ನು ಬಂಧಿಸಿದ್ದಾರೆ. ಆದರೆ, ಆಮೇಲೆ ಸಾವಿರಾರು ಜನರು ಸೇರಿ ಪೊಲೀಸ್ ಠಾಣೆಗೆ ಮುತ್ತಿಗೆ ಹಿಂಸಾಚಾರಕ್ಕೆ ಕಾರಣರಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲ್ಲು ಹೊಡೆಯುವುದು, ಪೊಲೀಸ್ ವಾಹನ ಜಖಂ ಮಾಡೋದು, ಸಿಕ್ಕ ಸಿಕ್ಕಾಗೆ ಒಂದು ಅರಾಜಕತೆ ನಿರ್ಮಾಣ ಮಾಡುವ ಕೆಲಸವನ್ನು ಒಂದು ಗುಂಪು ಮಾಡಿದೆ. ಪೊಲೀಸರಿಗೂ, ಅನೇಕ ಜನರಿಗೆ ಗಾಯವಾಗಿದೆ. ನಾನು ಹಾಗೂ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಎಲ್ಲರೂ ಹೋಗಿ ಅವರನ್ನೆಲ್ಲಾ ಮಾತನಾಡಿಸಿ ಬಂದಿದ್ದೇವೆ ಎಂದರು.ಆದರೂ ಪೊಲೀಸರು ಬಹಳ ಸಂಯಮದಿಂದ ವರ್ತಿಸಿದ್ದಾರೆ. ಸುಮಾರು ಒಂದು ಗಂಟೆಯೊಳಗಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇಲ್ಲದಿದ್ದರೆ ಕೆ.ಜೆ.ಹಳ್ಳಿ, ಡಿ.ಜೆ.ಹಳ್ಳಿ ಘಟನೆ ಹುಬ್ಬಳ್ಳಿಯಲ್ಲಿಯೂ ನಡೆದು ಹೋಗ್ತಿತ್ತು. ಈಗಾಗಲೇ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಅನೇಕ ಜನರನ್ನು ವಶಕ್ಕೆ ಪಡೆಯಲಾಗಿದೆ.

ಪೊಲೀಸರು ನಿನ್ನೆಯಿಂದ ಕಾರ್ಯಾಚರಣೆ ಮಾಡ್ತಿದ್ದಾರೆ ಎಂದರು.ಸಿಸಿಟಿವಿ ದೃಶ್ಯ ಆಧರಿಸಿ ಬಂಧನವಾಗುತ್ತಿದೆ. ಈಗಾಗಲೇ 80 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೊಂದು ದುರದೃಷ್ಟಕರವಾದ ಸಂಗತಿ. ಇದರ ಹಿಂದೆ ಕೋಮುವಾದ ಇದೆ. ಯಾರೋ ಕೆಲವರ ಪ್ರಚೋದನಕಾರಿಯಿಂದ ಇದು ಆಗುತ್ತಿದೆ. ಎಲ್ಲಾ ಸಮುದಾಯದವರು ಸಹ ಸಂಯಮ ವಹಿಸಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಎಲ್ಲಾ ಧರ್ಮದವರು ಒಟ್ಟಾಗಿ ಒಂದಾಗಿ ಈ ದೇಶದಲ್ಲಿ ಬದುಕಬೇಕು. ಈ ದೃಷ್ಟಿಯಿಂದ ಎಲ್ಲಾ ಧರ್ಮದ ಹಿರಿಯರು ಕುಳಿತು ಮಾತನಾಡಬೇಕು.  ಯಾರು ಇಂತಹ ವಿಚ್ಛಿದ್ರಕಾರಿ ಶಕ್ತಿ ಇದ್ದಾರೋ ಅವರಿಗೆ ಪಾಠ ಹೇಳುವ ಕೆಲಸ ಮಾಡಬೇಕು ಎಂದರು.ಪೊಲೀಸರಿಗೆ ಬೆದರಿಕೆ ಹಾಕ್ತಿದ್ದಾರೆ, ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ. ಸುಮಾರು 8 ಜನಕ್ಕಿಂತ ಹೆಚ್ಚು ಪೊಲೀಸರಿಗೆ ಗಾಯವಾಗಿದೆ. ಸುಮಾರು 8-10 ಪೊಲೀಸ್ ವಾಹನ ಜಖಂ ಆಗಿವೆ. ಖಾಸಗಿ ವಾಹನಗಳು ಜಖಂ ಆಗಿವೆ.

ದೇವಸ್ಥಾನಕ್ಕೆ ಕಲ್ಲು ಎಸೆದು ಪುಡಿ ಮಾಡಿದ್ದಾರೆ. ಸ್ಟೇಟಸ್ ಹಾಕಿದವನನ್ನು ವಶಕ್ಕೆ ಪಡೆದು, ಆತನ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಹಳೆ ಹುಬ್ಬಳ್ಳಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾನೂನನ್ನು ಯಾರೇ ಕೈಗೆ ತೆಗೆದುಕೊಂಡರೂ ಅವರನ್ನು ಬಿಡುವುದಿಲ್ಲ. ಸರಿಯಾದ ಶಿಕ್ಷೆ ಹಾಗೇ ಆಗುತ್ತದೆ. ದೇಶದಾದ್ಯಂತ ಕೆಲವು ವಿಚಿದ್ರಾಕಾರಿ ಶಕ್ತಿಗಳು ವ್ಯವಸ್ಥಿತವಾಗಿ ಇಂತಹ ದುಷ್ಕೃತ್ಯ ನಡೆಸಿವೆ. ಖಂಡಿತ ಅವರ ವಿರುದ್ದ ಕ್ರಮ ಆಗುತ್ತದೆ ಎಂದರು.

ವರದಿ ಮಂಜುನಾಥ್ ಶೆಟ್ಟಿ…