ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ 40% ಕಮಿಷನ್
ಆರೋಪ ಹೊತ್ತು ‘ಎ-1’ ಅರೋಪಿಯಾಗಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು
ಬಂಧಿಸದೇ ಅವರಿಗೆ ಪೊಲೀಸ್ ಎಸ್ಕಾರ್ಟ್ ಒದಗಿಸಿರುವುದನ್ನು ಖಂಡಿಸಿ ಶಿವಮೊಗ್ಗ ಜಿಲ್ಲಾ
ಎನ್.ಎಸ್.ಯು.ಐ ವತಿಯಿಂದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಈ ಹಿಂದೆಯೇ ಕೆ.ಎಸ್.ಈಶ್ವರಪ್ಪನವರು ತಾವು
ನಿರ್ವಹಿಸಿದ ಕಾಮಗಾರಿಯ ಬಿಲ್ ಪಾವತಿಸಲು 40ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ.
ಬಿಲ್ ಪಾವತಿಯಾಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು
ಮುಖ್ಯಮಂತ್ರಿ, ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದು, ಇದು ಜಗಜ್ಜಾಹೀರಾಗಿತ್ತು.
ಈ ಸಂದರ್ಭದಲ್ಲೇ ಎಚ್ಚೆತ್ತುಕೊಳ್ಳದ ಸರ್ಕಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಹಾದಿ
ಹಿಡಿಯುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಸಂತೋಷ್ ಪಾಟೀಲ್ ಉಡುಪಿಯ ಲಾಡ್ಜ್‍ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ
ಸೋಷಿಯಲ್ ಮೀಡಿಯಾಗಳಲ್ಲಿ ‘ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪನವರೇ ನೇರ ಕಾರಣ, ಅವರಿಗೆ
ತಕ್ಕ ಶಿಕ್ಷೆಯಾಗಬೇಕು. ನನ್ನ ಕುಟುಂಬದ ನೆರವಿಗೆ ಪ್ರಧಾನಮಂತ್ರಿಗಳು,
ಮುಖ್ಯಮಂತ್ರಿಗಳು ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ಬರಬೇಕು’ಎಂದು
ಡೆತ್‍ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಕೇವಲ
ಮುಜುಗರದಿಂದ ತಪ್ಪಿಸಿಕೊಳ್ಳಲು ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಲಾಗಿದೆಯಷ್ಟೆ.
ಈಶ್ವರಪ್ಪ ಅವರ ವಿರುದ್ಧ ಐಪಿಸಿ ಕಲಂ 306, 34ರ ಅಡಿಯಲ್ಲಿ ಎಫ್‍ಐಆರ್ ದಾಖಲಾಗಿದ್ದರೂ
ಅವರನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲರಿಗೂ ಒಂದೇ ಕಾನೂನು ಎಂದು ಹೇಳುವ ಸರ್ಕಾರ ಹಾಗೂ ರಾಷ್ಟ್ರಭಕ್ತರ ಪಕ್ಷದ ನಾಯಕರು
ಈಶ್ವರಪ್ಪನವರ ಬಂಧನಕ್ಕೆ ಕ್ರಮ ಕೈಗೊಳ್ಳದೇ ಭ್ರಷ್ಟಾಚಾರ ಹಾಗೂ ಆತ್ಮಹತ್ಯೆಗೆ
ಪ್ರಚೋದನೆ ನೀಡಿದ ಆರೋಪಿಗೆ ಎಸ್ಕಾರ್ಟ್ ಕೊಟ್ಟು ರಕ್ಷಣೆ ಮಾಡುತ್ತಿರುವುದು
ಎಷ್ಟರಮಟ್ಟಿಗೆ ಸರಿ ? ಕೂಡಲೇ ಸಂತೋಷ್ ಪಾಟೀಲ್ ಸಾವಿಗೆ ಕಾರಣವಾಗಿರುವ ಎ-1 ಆರೋಪಿ
ಕೆ.ಎಸ್.ಈಶ್ವರಪ್ಪನವರನ್ನು ಬಂಧಿಸಬೇಕು. ಅವರಿಗೆ ಒದಗಿಸುತ್ತಿರುವ ಎಸ್ಕಾರ್ಟ್
ಹಿಂಪಡೆಯಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈಶ್ವರಪ್ಪ ಅವರ ಬಂಧನವಾಗುವವರೆಗೂ
ಎನ್.ಎಸ್.ಯು.ಐ.ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ. ಜಿಲ್ಲಾಧ್ಯಕ್ಷ ವಿಜಯ, ನಗರ ಅಧ್ಯಕ್ಷ ಚರಣ್,
ಗ್ರಾಮಾಂತರ ಅಧ್ಯಕ್ಷ ಹರ್ಷಿತ್  ಗೌಡ,ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ
ಮೊಹಮ್ಮದ್ ನಿಹಾಲ್, ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ,ಯುವ
ಮುಖಂಡ ಮಧುಸೂದನ್ , ಅಕ್ಬರ್,ಇಮ್ರಾನ್ ,ಗಿರೀಶ್ ,ಚಂದ್ರೋಜಿ ರಾವ್ ,ಗೌತಮ್,
ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ವರದಿ ಮಂಜುನಾಥ್ ಶೆಟ್ಟಿ…