ಶಿವಮೊಗ್ಗ: 2025ರ ವೇಳೆಗೆ ಕರ್ನಾಟಕ ರಾಜ್ಯವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಸಾಧಿಸಬೇಕಿದ್ದು, ಎಲ್ಲರೂ ಎಲ್ಲ ಹಂತಗಳಲ್ಲಿ ಮಲೇರಿಯಾ ನಿವಾರಣಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ಹೇಳಿದರು.
ವಿಶ್ವ ಮಲೇರಿಯಾ ದಿನ ಪ್ರಯುಕ್ತ ಶಿವಮೊಗ್ಗ ನಗರದ ಸೂರ್ಯ ನರ್ಸಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ಕೈಗೊಂಡ ಸಮರೋಪಾದಿಯ ಕಾರ್ಯ ಚಟುವಟಿಕೆಗಳ ಅನುಷ್ಠಾನದಿಂದ ಮಲೇರಿಯಾ ರೋಗವು ನಿವಾರಣಾ ಹಂತಕ್ಕೆ ತಲುಪಿದ್ದು, 2025ರ ವೇಳೆಗೆ ಮಲೇರಿಯಾ ನಿವಾರಣಾ ಗುರಿ ಸಾಧಿಸುವ ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ಮಲೇರಿಯಾ ಪ್ರಕರಣಗಳು ಗಣನೀಯವಾಗಿ ಕಡಿಮೆ ಆಗುತ್ತಿವೆ ಎಂದು ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷ ಏಪ್ರಿಲ್ 25ರಂದು ವಿಶ್ವ ಮಲೇರಿಯಾ ದಿನ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದು, ನವೀನ ವಿಧಾನಗಳನ್ನು ಬಳಸಿ ಮಲೇರಿಯಾ ಕಡಿಮೆ ಮಾಡಬೇಕಿದೆ. ಮಲೇರಿಯಾ ರೋಗ ಹರಡುವಿಕೆ ಬಗ್ಗೆ ಸರಿಯಾದ ಜಾಗೃತಿ ಮೂಡಿಸಿಕೊಳ್ಳಬೇಕಿದೆ. ಮಲೇರಿಯಾ ಮುಕ್ತ ಕರ್ನಾಟಕ ನಿರ್ಮಿಸುವಲ್ಲಿ ಎಲ್ಲರ ಸಹಕಾರ ಮುಖ್ಯ ಎಂದರು.
ರಕ್ತ ಪರೀಕ್ಷೆ ಮಾಡಿಸುವುದರಿಂದ ಮಲೇರಿಯಾ ಪತ್ತೆ ಹಚ್ಚಬಹುದು. ರೋಗ ದೃಢಪಟ್ಟ ನಂತರ ಸೂಕ್ತ ಚಿಕಿತ್ಸೆ ಪಡೆಯುವುದು ಅತಿ ಮುಖ್ಯವಾಗಿರುತ್ತದೆ. ವೈದ್ಯರ ಮಾರ್ಗದರ್ಶನ ಅನುಸಾರ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಶಿವಮೊಗ್ಗ ಪೂರ್ವದ ಜಿ.ವಿಜಯಕುಮಾರ್, ಸೂರ್ಯ ನರ್ಸಿಂಗ್ ಕಾಲೇಜ್ ಸಂಸ್ಥಾಪಕಿ ಡಾ. ನೇತ್ರಾವತಿ, ಸೂರ್ಯ ನರ್ಸಿಂಗ್ ಕಾಲೇಜ್ ಶಿವಮೊಗ್ಗ ಪ್ರಾಚಾರ್ಯ ಡಾ. ಶಾಮಸುಂದರ್, ಜಿಲ್ಲಾ ಸಹಾಯಕ ಕೀಟ ಶಾಸ್ತ್ರಜ್ಞ ಪರಶುರಾಮ ನಾಯಕ್, ಪ್ರಭಾರ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ಉಮೇಶ್ ಎಚ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಾರಾಯಣ್, ಆರೋಗ್ಯ ನಿರೀಕ್ಷಣಾಧಿಕಾರಿ ಶಶಿಕುಮಾರ್, ಆರೋಗ್ಯ ನಿರೀಕ್ಷಣಾಧಿಕಾರಿ ಧೀರೇಂದ್ರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರತಿಮಾ ಡಾಕಪ್ಪ, ನಾಗರಾಜ್, ನಾರಾಯಣಸ್ವಾಮಿ, ಅವಿನಾಶ್, ಸಂದೀಪ್, ಗಣೇಶ್ ಮತ್ತಿತರರು ಇದ್ದರು.