ಶಿವಮೊಗ್ಗ: ಕನಿಷ್ಠ ಬೆಂಬಲಬೆಲೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ
ಒತ್ತಾಯಿಸಿ ರಾಜ್ಯ ರೈತ ಸಂಘದ ಸಾಗರ ಮತ್ತು ಸುತ್ತಮುತ್ತ ವಿಭಾಗದ ಪದಾಧಿಕಾರಿಗಳು
ಇಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ನಿರ್ಲಕ್ಷಿಸಿವೆ. ರೈತವಿರೋಧಿ ಕಾಯ್ದೆಗಳು ರೈತಕುಲವನ್ನೇ ನಾಶ ಮಾಡಲು ಹೊರಡಿದೆ. ರಾಜ್ಯದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ ಇತ್ಯಾದಿ ದವಸ ಧಾನ್ಯಗಳನ್ನು ಖಾಸಗಿಯವರು ಅತ್ಯಂತ ಕಡಿಮೆ ಬೆಲೆಗೆ
ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರ ತಕ್ಷಣವೇ ಖರೀದಿ ಕೇಂದ್ರಗಳ ಮೂಲಕ ಕನಿಷ್ಠ ಬೆಂಬಲ ಬೆಲೆ ನೀಡಿ ಖರೀದಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಬೇಸಿಗೆ ಆರಂಭವಾಗಿದ್ದು, ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಬೆಳೆಗಳೆಲ್ಲಾ ಒಣಗಿ ಹೋಗಿವೆ. ಮನೆ ವಿದ್ಯುತ್ ಬಿಲ್ ಕೂಡ ಹೆಚ್ಚಿಸಲಾಗಿದೆ. ತಕ್ಷಣವೇ ವಿದ್ಯುತ್ ಬೆಲೆಯನ್ನು ಇಳಿಸಬೇಕು. ಮತ್ತು ರೈತರ
ವಿದ್ಯುತ್ ಬಿಲ್ ಅನ್ನು ಕಟ್ಟುವಂತೆ ಬಲವಂತ ಮಾಡುವುದು ಹಾಗೂ ಸಂಪರ್ಕ ಕಡಿತ ಮಾಡುವುದನ್ನು ಮಾಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ರಾಜ್ಯದಲ್ಲಿ ರೈತವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು. ಬೆಂಬಲ ಬೆಲೆಯಲ್ಲಿ ಖರೀದಿಸುವ ಬೆಲೆಯನ್ನು ಪುನರ್ ಪರಿಶೀಲನೆ ಮಾಡಬೇಕು. ಶರಾವತಿ ವಿದ್ಯುತ್ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕು. ಭೂಮಿಯ ಹಕ್ಕು
ಕೊಡಬೇಕು. ಸಾಗರ ತಾಲ್ಲೂಕಿನ ಬಾರಂಗಿ, ಬಾನುಕುಳಿ, ಉರುಳುಗಲ್ಲು ಮುಂತಾದ ಗ್ರಾಮಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅವರೆಲ್ಲ
ಕತ್ತಲೆಯಲ್ಲಿದ್ದಾರೆ. ನಾಗರೀಕ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಮೂಲಭೂತ
ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕೆಳದಿ ಭೀಮೇಶ್ವರ ದೇವಸ್ಥಾನ, ನಾಯಕನಕೋಟೆ, ಪುರಾತನ ಆಂಜನೇಯ ದೇವಸ್ಥಾನ, ಐತಿಹಾಸಿಕ
ಗೋವರ್ಧನಗಿರಿ ಕೋಟೆ ಮುಂತಾದ ಪಾರಂಪರಿಕ, ಐತಿಹಾಸಿಕ ಸ್ಥಳಗಳ ರಕ್ಷಣೆಯಾಗಬೇಕು. ಕಾನೂರಿನಿಂದ ಗೇರುಸೊಪ್ಪೆಯವರೆಗೂ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ಉಪಾಧ್ಯಕ್ಷ ಎಸ್. ಶಿವಾನಂದ ಕುಗ್ವೆ, ಪ್ರಮುಖರಾದ ಎನ್.ಡಿ. ವಸಂತಕುಮಾರ್, ರವಿ ಬಿಳಿಸಿರಿ, ರಮೇಶ್ ಐಗಿನಬೈಲು, ಎಂ.ಬಿ. ಮಂಜಪ್ಪ, ಲಕ್ಷ್ಮಣ ಹೆಬ್ಬನಕೇರಿ, ನಾಗರಾಜ ಸಾಲ್ಕೋಡ್, ಬಿಲ್ಲಂದೂರು ತ್ಯಾಗಮೂರ್ತಿ ಸೇರಿದಂತೆ ಅನೇಕ
ರೈತರು ಭಾಗವಹಿಸಿದ್ದರು.