ಶಿವಮೊಗ್ಗ: ಮಹಾನಗರ ಪಾಲಿಕೆಯಲ್ಲಿ ವಿವಿಧ ಕೆಲಸಕ್ಕಾಗಿ ಬರುವ ಸಾರ್ವಜನಿಕರಿಗೆ ಸೌಲಭ್ಯಗಳಿಲ್ಲದೇ ಕಿರಿಕಿರಿ ಅನುಭವಿಸುತ್ತಿದ್ದಾರೆ.

ಮಹಾನಗರ ಪಾಲಿಕೆಯಲ್ಲಿ ಈಗ ಕಂದಾಯ ಕಟ್ಟಲು ಸಾರ್ವಜನಿಕರು ಹೆಚ್ಚಾಗಿ ಬರುತ್ತಿದ್ದು, ಪ್ರಮುಖವಾಗಿ ಖಾತೆ ಎಕ್ಸ್ ಟ್ರ್ಯಾಕ್ಟ್ ಪಡೆಯಲು ಸರತಿಯ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಹೀಗೆ ಸರತಿ ಸಾಲಿನಲ್ಲಿ ನಿಲ್ಲುವಾಗ ಅಲ್ಲಿ ನೆರಳಿನ ವ್ಯವಸ್ಥೆಯಿಲ್ಲ. ಬಿಸಿಲಿನ ಬೇಗೆಯಲ್ಲಿ ಸಾರ್ವಜನಿಕರು ಬೇಯುತ್ತಿದ್ದಾರೆ. ಅದರಲ್ಲೂ ಮಹಿಳೆಯರು ವಯಸ್ಸಾದವರು ಹೆಚ್ಚಾಗಿರುವುದರಿಂದ ಬಿಸಲ ತಾಪ ತಾಳಲಾರದೆ ತಲೆತಿರುಗಿ ಬೀಳುವ ಸಾಧ್ಯತೆಗೂ ಇಲ್ಲದಿಲ್ಲ.ಹಾಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೆರಳು ಒದಗಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. ಈ ಮೊದಲು ಕುಳಿತುಕೊಳ್ಳಲು ಕಟ್ಟೆಗಳಿದ್ದವು.

ಆದರೆ, ಈಗ ಪಾಲಿಕೆ ಆವರಣದಲ್ಲಿಯೂ ಕಾಮಗಾರಿ ನಡೆಯುತ್ತಿರುವುದರಿಂದಾಗಿ ಕುಳಿತುಕೊಳ್ಳಲು ಜಾಗವಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಪಾಲಿಕೆಗೆ ಇದ್ಯಾವುದರ ಬಗ್ಗೆ ಆಸಕ್ತಿಯೂ ಇಲ್ಲ. ಕೂಡಲೇ ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…