ಮಳೆ ಚಳಿ ಗಾಳಿ
ಸುಡುಬಿಸಿಲ್ಲೆನ್ನದೆ
ದುಡಿಯುವವರು ನಾವು
ದೇಶದ ಅನ್ನದಾತರೆಂಬರು
ನಮ್ಮ ಬೆನ್ನೆಲುಬು ಬಾಗಿದರೂ
ಹಸಿದವರ ಹೊಟ್ಟೆ ತುಂಬಿಸುವವರು.

ಇಟ್ಟಿಗೆ ಜಲ್ಲಿಕಲ್ಲುಗಳ
ಹೊತ್ತು…ಎತ್ತೆತ್ತರದ
ಗಗನ ಚುಂಬಿ
ಕಟ್ಟಡವ ಕಟ್ಟುವವರು ನಾವು
ನಮ್ಮ ಕನಸಿನ ಆಶಾಗೋಪುರವ
ಅದರಲ್ಲೇ ಕಾಣುವವರು.

ನಮ್ಮ ಬಟ್ಟೆಗಳು ಹರಿದಿದ್ದರೂ
ಬಣ್ಣ ಬಣ್ಣದ ರೇಷ್ಮೆ..
ಜರತಾರಿ ಸೀರೆ..ಬಟ್ಟೆಗಳ
ನೇಯುವವರು ನಾವು
ಆ ಬಣ್ಣಗಳಲ್ಲೇ ಸುಂದರ
ಬದುಕ ಕಾಣುವವರು ನಾವು

ಸ್ವಚ್ಛಭಾರತದ ರಾಯಭಾರಿಗಳು
ನಾವು…ನಾವಿಲ್ಲದೇ
ನಾರುವುದು ಜಗವು(ಜಾಗವು)
ಆ ದುರ್ವಾಸನೆಯಲ್ಲೂ
ಕೀಳರಿಮೆಯಿಲ್ಲದೆ
ಶ್ರಮಿಸುವ ಕಾಯಕನಿರತರು ನಾವು.

ನಮಿಸುವ ಕೈಗಳಿಗಿಂತ
ದುಡಿಯುವ ಕೈಗಳು ಈ ದೇಶದ
ಅಭಿವೃದ್ಧಿಯ ಶಕ್ತಿಗಳು
ನಾವೆಂದು ಸಾರಿದವರು
ಸಂಬಳ ಕೊಡುವ ಮಟ್ಟಕ್ಕೆ
ಮಾಲೀಕನನ್ನು ಬೆಳೆಸಿದವರು ನಾವು
ನಾವು ಶ್ರಮಿಕರು ನಾಡಿನ ಶಕ್ತಿಗಳು
ಹಲವು ಪಾತ್ರಧಾರಿಯ ವ್ಯಕ್ತಿಗಳು.

*ಅನಿತಕೃಷ್ಣ* *ಶಿಕ್ಷಕಿ.ತೀರ್ಥಹಳ್ಳಿ.*