ಶಿವಮೊಗ್ಗ : ವಿಷಯಗಳ ಪರಿಣಾಮಕಾರಿ ಕಲಿಕೆಗೆ ಪ್ರಾದೇಶಿಕ ಭಾಷಾ ಶಬ್ದಕೋಶ ಸಹಕಾರಿಯಾಗಿಲಿದೆ ಎಂದು ಭಾರತ ಸರ್ಕಾರದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ ಸಹಾಯಕ ನಿರ್ದೇಶಕ ಡಾ.ಸಂತೋಷ್ ಕುಮಾರ್ ಹೇಳಿದರು.

ಅವರು ಸೋಮವಾರ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಆಯೋಗದ‌ ವತಿಯಿಂದ ಏರ್ಪಡಿಸಿರುವ ಐದು ದಿನಗಳ ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ತಾಂತ್ರಿಕ ಪದಗಳ ತ್ರಿಭಾಷಾ ಶಬ್ದಕೋಶ ರಚನಾ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು ದೈನಂದಿನವಾಗಿ ಬಳಸುವ ನಮ್ಮ ಪ್ರಾದೇಶಿಕ ಭಾಷೆಯಲ್ಲಿ ತಾಂತ್ರಿಕ ವಿಷಯಗಳನ್ನು ಅಧ್ಯಯನ ಮಾಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕಲಿಕಾ ಗುಣಮಟ್ಟ ಹೆಚ್ಚಿಸಲು ಸಾಧ್ಯವಾಗಲಿದೆ. ಈ ಹಿನ್ನಲೆಯಲ್ಲಿ ಭಾರತ ಸರ್ಕಾರ ತಾಂತ್ರಿಕ ಪರಿಭಾಷೆಯ ಆಯೋಗದ ಮೂಲಕ ಸುಮಾರು ಇಪ್ಪತ್ತೆರಡು ಪ್ರಾದೇಶಿಕ ಭಾಷಾ ಶಬ್ದಕೋಶಗಳನ್ನು ರಚನೆ ಮಾಡುತ್ತಿದೆ. ಇಂಗ್ಲೀಷ್ ಭಾಷೆಯಲ್ಲಿನ ಅನೇಕ ವಿಚಾರಗಳು ಕನ್ನಡದಲ್ಲಿ ಅಧ್ಯಯನ ಮಾಡುವುದರ ಮೂಲಕ ವಿಷಯಗಳ ಆಳವಾದ ಜ್ಞಾನಾರ್ಜನೆ ಕೈಗೊಳ್ಳಲು ಪೂರಕವಾಗಲಿದ್ದು ಮಾತೃ ಭಾಷೆಯಲ್ಲಿನ ಕಲಿಕೆ ನಮ್ಮ ಮೆದುಳಿನಲ್ಲಿ ಸದಾ ಧನಾತ್ಮಕವಾಗಿ ಉಳಿಯುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ ವಸಾಹತುಶಾಹಿಗಳ ಆಡಳಿತಕ್ಕೆ ಒಳಪಟ್ಟಿದ್ದ ಅನೇಕ‌ ಪ್ರದೇಶಗಳಲ್ಲಿ ಇಂದಿಗೂ ಉನ್ನತ ವ್ಯಾಸಂಗದ ಸಂದರ್ಭದಲ್ಲಿ ಇಂಗ್ಲೀಷ್ ಮೂಲಕ ಕಲಿಕೆಯೇ ಅನಿವಾರ್ಯ ಎಂಬಂತಾಗಿತ್ತು. ಅದರೇ ಇಂದಿನ ದಿನಮಾನದಲ್ಲಿ ಅಂತಹ ಸಂದರ್ಭ ಬದಲಾಗುತ್ತಿದೆ. ಶಿಕ್ಷಣದ ನಿಜವಾದ ಆಶಯ ಪೂರ್ಣಗೊಳ್ಳುವುದೇ ಮಾತೃಭಾಷೆಯ ಕಲಿಕೆಯಿಂದ ಎಂಬ ಅರಿವು ಎಲ್ಲರಲ್ಲೂ ಒಡಮೂಡುತ್ತಿದೆ. ಇದಕ್ಕೆ ಪೂರಕವಾಗಿ ಪ್ರಾದೇಶಿಕ ಭಾಷಾ ಶಬ್ದಕೋಶಗಳು ರಚನೆಯಾಗುತ್ತಿರುವುದು ಅಭಿನಂದನಾರ್ಹ ವಿಚಾರವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜೆ.ಎನ್.ಎನ್ ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಮಂಜುನಾಥ. ಪಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಆರ್.ವಿ ಕಾಲೇಜಿನ ಸಹ ಪ್ರಾದ್ಯಾಪಕ ಡಾ.ವಿ.ಅನಂತರಾಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಲೆಕ್ಟ್ರಾನಿಕ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕರಾದ ಉಜ್ವಲ ರವಿಕುಮಾರ್ ಪ್ರಾರ್ಥಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ನಿರೂಪಿಸಿದರು. ಜೆ.ಎನ್.ಎನ್.ಸಿ.ಇ ಕಾಲೇಜಿನ ಉಪನ್ಯಾಸಕರು ಸೇರಿದಂತೆ ವಿವಿಧ ಕಾಲೇಜುಗಳ ಪ್ರಾದ್ಯಾಪಕರು ವಿಷಯ ತಜ್ಞರಾಗಿ ಭಾಗವಹಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…