ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಪೂಜಿನಗರ ಇಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಗೂ ವಿವಿಧ ಘಟಕಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಒಂದು ವಾರದ ಯೋಗ ತರಬೇತಿ ಶಿಬಿರವನ್ನು ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ.ನಾಗರಾಜ್ ಪರಿಸರ ಉದ್ಘಾಟಿಸಿದರು.

ವಿದ್ಯಾರ್ಥಿಗಳ ನಡೆ ಯೋಗದ ಕಡೆ ಎಂದು ತಿಳಿಸುತ್ತಾ ಯೋಗದಿಂದ ಆಗುವ ಪ್ರಯೋಜನಗಳನ್ನು ತಿಳಿಸಿದರು. ವಿದ್ಯಾರ್ಥಿದೆಸೆಯಲ್ಲಿ ಯೋಗ ಪ್ರಾಣಾಯಾಮವನ್ನು ನಿತ್ಯಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಖಂಡಿತ, ಅಲ್ಲದೆ ಯೋಗವು ಮಾನಸಿಕವಾಗಿ,ಶಾರೀರಿಕವಾಗಿ ಸದೃಢರಾಗಿಸುವುದಲ್ಲದೇ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶವನ್ನೂ ಸಹ ನೀಡುತ್ತದೆ ಎಂದು ತಿಳಿಸಿದರು. ನಮ್ಮ ದೇಶದ ಹೆಮ್ಮೆಯ ಪ್ರಧಾನಿಗಳಾ ದ ನರೇಂದ್ರಮೋದಿಯವರು ತಿಳಿಸುವ ಹಾಗೆ ಪ್ರತಿನಿತ್ಯ ವಿದ್ಯಾರ್ಥಿಗಳು ನಮ್ಮ ಆರೋಗ್ಯಕ್ಕಾಗಿ ಕನಿಷ್ಠ ಒಂದು ಗಂಟೆಯನ್ನಾದರೂ ಮೀಸಲಿಟ್ಟು ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಇಡೀ ದೇಶದಲ್ಲಿ ಇಂತಹ ಉತ್ತಮ ಕಾರ್ಯಗಳನ್ನು ಮಾಡುತ್ತಿರುವುದು ಬಹಳ ಒಳ್ಳೆಯ ಕೆಲಸವಾಗಿದೆ, ಪ್ರತಿನಿತ್ಯ ಯೋಗ ಪ್ರಾಣಾಯಾಮ, ಉತ್ತಮ ಆಹಾರ ಸೇವನೆಯ ಅಭ್ಯಾಸವನ್ನು ರೂಡಿಸಿಕೊಂಡರೆ ಉತ್ತಮ ಆರೋಗ್ಯದೊಂದಿಗೆ ಸನ್ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಶ್ರೀ ಮಂಜುನಾಥ ಸ್ವಾಮಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ಇಂತಹ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ಉತ್ತಮ ಸಾಧನೆ ಮಾಡಿ ಎಂದು ಹರಸಿದರು. ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಕಾರ್ಯದರ್ಶಿ ಗಳಾದ ಶ್ರೀ ಜಿ ವಿಜಯ್ ಕುಮಾರ್ ಮಾತನಾಡುತ್ತಾ ವಿದ್ಯಾರ್ಥಿಗಳು ಹೆತ್ತ ತಂದೆ-ತಾಯಿಯರಿಗೆ ಹಾಗೂ ದೇಶಕ್ಕೆ ಎಂದು ಹೊರೆಯಾಗಬಾರದು, ಆ ನಿಟ್ಟಿನಲ್ಲಿ ಪ್ರತಿನಿತ್ಯ ಇಂತಹ ಒಳ್ಳೆಯ ಅಭ್ಯಾಸಗಳನ್ನು ರೂಡಿಸಿಕೊಳ್ಳಿ ಎಂದು ತಿಳಿಸಿದರು. ಯೋಗ ಗುರುಗಳಾದ ಶ್ರೀ ಅರವಿಂದ್ ರವರು ಸರಳ ಯೋಗಾಸನಗಳ ಪ್ರಾಮುಖ್ಯತೆಯನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ ಧನಂಜಯ ವಹಿಸಿ ಪರಿಸರ ಸಂರಕ್ಷಣೆ ಮಾಡುತ್ತಾ ಯೋಗ ಜೀವನವನ್ನು ವಿದ್ಯಾರ್ಥಿಗಳು ನಡೆಸಬೇಕೆಂದು ಕೇಳಿಕೊಂಡರು.

ವೇದಿಕೆಯಲ್ಲಿ ಉಪನ್ಯಾಸಕರುಗಳಾದ ಶ್ರೀ ಚೆನ್ನಪ್ಪ, ಶ್ರೀ ಹರಿಶ್ , ದೈಹಿಕ ಶಿಕ್ಷಕರಾದ ಶ್ರೀ ಜಯಕೀರ್ತಿ ಸರ್ವರನ್ನು ಸ್ವಾಗತಿಸಿದರು,ರಾ.ಸೇ. ಯೋ ಅಧಿಕಾರಿ ಡಾ.ರೇಷ್ಮಾ ಕಾರ್ಯಕ್ರಮವನ್ನು ನಿರೂಪಿಸಿದರು.

ವರದಿ ಮಂಜುನಾಥ್ ಶೆಟ್ಟಿ…