
ಶಿವಮೊಗ್ಗ: ಸಂಘಟನೆ ಮತ್ತು ಶಿಕ್ಷಣದಿಂದ ಎಲ್ಲಾ ಹಿಂದುಳಿದ ಸಮಾಜಗಳು ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಗಂಗಾಮತ ಸಮಾಜದ ಮಾರ್ಗದರ್ಶಕ ಹಾಗೂ ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್. ಹೊನ್ನಾಳಿ ಹೇಳಿದರು.

ಅವರು ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಗಂಗಾಮತ ಸಮಾಜ ಹಾಗೂ ನೌಕರರ ಸಂಘ ಮತ್ತು ಇತರ ಸಹ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ವಿಶೇಷ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಜು. 10 ರಂದು ಶಿವಮೊಗ್ಗದಲ್ಲಿ ಗಂಗಾಮತ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷದ ವಿಷಯ. ಈ ಸಮಾರಂಭ ರಾಜ್ಯಮಟ್ಟದ್ದಾಗಿರುವುದರಿಂದ ಎಲ್ಲರೂ ಒಗ್ಗಟ್ಟಾಗಿ ಸಂಘಟನೆಯಿಂದ ನಡೆಸಿ ಎಂದು ಕರೆ ನೀಡಿದರು.ಎಲ್ಲಾ ಹಿಂದುಳಿದ ಸಮಾಜಗಳು ಸಾಮಾನ್ಯವಾಗಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಿಂದೆ ಉಳಿದಿರುತ್ತವೆ. ಗಂಗಾಮತ ಸಮಾಜ ಕೂಡ ಸಮಾಜದ ಮುಖ್ಯವಾಹಿನಿಗೆ ಬರಬೇಕಾಗಿದೆ. ಹಾಗಾಗಿ ಶಿಕ್ಷಣ ಪಡೆಯಬೇಕು. ಕಲಿತವರು ಕಲಿಯದವರಿಗೆ ಕಲಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ನೌಕರರು ಪ್ರತಿಭಾ ಪುರಸ್ಕಾರ ಏರ್ಪಡಿಸಿರುವುದು ಹೆಮ್ಮೆ ವಿಷಯ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನಮ್ಮ ಸಮಾಜದ ಹೆಮ್ಮೆಯ ವ್ಯಕ್ತಿ ಜಿ. ಶಂಕರ್ ಅವರ ಸಮಾಜದ ಅಭಿವೃದ್ಧಿಯ ಕನಸನ್ನು ನಾವೆಲ್ಲರೂ ನೆರವೇರಿಸೋಣ. ಇಡೀ ನೌಕರರ ವರ್ಗ ಮತ್ತು ಸಮಾಜದ ಮುಖಂಡರು ಒಗ್ಗೂಡಿ ಸಮಾಜವನ್ನು ಮುನ್ನಡೆಸೋಣ. ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರವಿದೆ ಎಂದರು.ರಾಜ್ಯ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹಾಲೇಶಪ್ಪ ಮಾತನಾಡಿ, ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದೆ. ಡಾ.ನಾಗೇಂದ್ರ ಎಫ್. ಹೊನ್ನಾಳಿ ಅವರ ಮಹತ್ವಾಕಾಂಕ್ಷಿ ಶ್ರೀ ಗಂಗಾ ವಿದ್ಯಾಸಿರಿ ಯೋಜನೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ. ಇದರಿಂದ ನಮ್ಮ ಸಮಾಜದ ಬಡ, ಪ್ರತಿಭಾನ್ವಿತ ಮಕ್ಕಳಿಗೆ ಅನುಕೂಲವಾಗುತ್ತದೆ. ಸಂಘಟನೆಯಿಂದ ಮಾತ್ರ ಸರ್ಕಾರದ ಸೌಲಭ್ಯಗಳನ್ನು ನಾವು ಪಡೆಯಲು ಸಾಧ್ಯ ಎಂದರು.

ಸಮಾಜದ ಮುಖಂಡರಾದ ಕೆ.ವಿ. ಅಣ್ಣಪ್ಪ, ಮೇಯರ್ ಸುನಿತಾ ಅಣ್ಣಪ್ಪ, ರಾಜ್ಯ ಸಂಘದ ಗೌರವಾಧ್ಯಕ್ಷ ಡಾ. ಕೃಷ್ಣಯ್ಯ, ಕಾರ್ಯಾಧ್ಯಕ್ಷ ಡಾ. ಧನಂಜಯ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ಗಂಗಾಮತ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ. ಕೆಂಚಪ್ಪ, ಕಾರ್ಯದರ್ಶಿಗಳಾದ ಎಂ.ಹೆಚ್. ಸತ್ಯನಾರಾಯಣ, ಆನಂದಪ್ಪ ಮೊದಲಾದವರು ಮಾತನಾಡಿದರು.ಶ್ರೀ ಗಂಗಾ ವಿದ್ಯಾಸಿರಿ ಯೋಜನೆಗೆ ಹಾವೇರಿಯ ಸುಣಗಾರ ಅವರು 25 ಸಾವಿರ ರೂ. ನೀಡಿದರು. ಸಭೆಯಲ್ಲಿ ಸಮಾಜದ ಗಣ್ಯರು, ಸಮಾಜದ ವಿವಿಧ ಘಟಕಗಳ ಮುಖ್ಯಸ್ಥರು, ಪದಾಧಿಕಾರಿಗಳು ಹಾಜರಿದ್ದರು.ಇದಕ್ಕೂ ಮೊದಲು ಸಮಾಜದ ಮುಖಂಡರು ಸಂಸದ ಬಿ.ವೈ. ರಾಘವೇಂದ್ರ ಅವರ ನಿವಾಸಕ್ಕೆ ತೆರಳಿ ಜು. 10 ರಂದು ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ನೀಡಿದರು.