ಶಿವಮೊಗ್ಗ : ಅದ್ಭುತ ಪರಿಕಲ್ಪನೆಯಾದ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರದಲ್ಲಿ ಕಲಿತ ವಿಚಾರಗಳು ಸಮಾಜದ ಅತ್ಯಂತ ದುರ್ಬಲ ವರ್ಗದವರಿಗೆ ಸಹಕಾರಿಯಾಗಿ ನಿಲ್ಲಲಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಹೇಳಿದರು.

ಶುಕ್ರವಾರ ಎಸ್.ಆರ್.ನಾಗಪ್ಪ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಶಿವಮೊಗ್ಗ ಸಮೀಪದ ಮುದುವಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಏಳು ದಿನಗಳ ಎನ್.ಎಸ್. ಎಸ್ ಶಿಬಿರದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು ಮುಂದಿನ ಭವಿಷ್ಯದ ಜನಾಂಗವನ್ನು ರೂಪಿಸುವಾಗ ಸಮಾಜದ ಎಲ್ಲಾ ಹಂತದ ಜನರೊಂದಿಗೆ ನಾಯಕತ್ವದ ಗುಣಗಳೊಂದಿಗೆ ತೊಡಗಿಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಲಿದೆ. ಶಿಬಿರದಲ್ಲಿನ ಅನುಭವಗಳು ವಿದ್ಯಾರ್ಥಿಗಳಲ್ಲಿ ಹಳ್ಳಿಯೊಂದಿಗಿನ ಮಾನವ ಸಹಜ ಅನುಬಂಧವನ್ನು ಮೂಡಿಸುತ್ತದೆ. ಯುವಕರು ಗ್ರಾಮೀಣ ಸಮಸ್ಯೆಗಳ ಬಗೆಗಿನ ಅಧ್ಯಯನದ ಜೊತೆಗೆ ಅದನ್ನು ಪರಿಹರಿಸುವ ಯೋಜನೆಗಳನ್ನು ರೂಪಿಸಬೇಕಿದೆ.

ನಾವು ಎಷ್ಟು ಓದಿದರೇನು ವಿದ್ಯೆಯ ಜೊತೆಗೆ ವಿನಯವಿಲ್ಲದಿದ್ದರೇ ಏನು ಸಾಧಿಸಲು ಸಾಧ್ಯವಿಲ್ಲ. ವ್ಯಕ್ತಿತ್ವ ನಿರೂಪಣೆಯಲ್ಲಿ ಮಾತು ಹಾಗೂ ನಡವಳಿಕೆ ಬಹಳ ಮುಖ್ಯ. ಉತ್ತಮ ವ್ಯಕ್ತಿತ್ವ ಮಾನವೀಯ ನೆಲೆಗಟ್ಟುಗಳೊಂದಿಗೆ ಆತ್ಮವಿಶ್ವಾಸದಿಂದ ಬದುಕು ಮುನ್ನಡೆಸಿರಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಎಸ್.ಆರ್.ಎನ್.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಸಂಯೋಜಕರಾದ ಡಾ|| ನಾಗರಾಜ ಪರಿಸರ, ಎಪಿಎಂಸಿ ಮಾಜಿ ನಿರ್ದೇಶಕರಾದ ಬಿ.ಹೆಚ್.ರಾಮಚಂದ್ರ, ಹಾರ್ನಳ್ಳಿ ಗ್ರಾಮಾಂತರ ಪ್ರೌಢಶಾಲೆಯ ಅಧ್ಯಕ್ಷರಾದ ಸಿ.ಪಿ.ನಾಗರಾಜ, ನಿವೃತ್ತ ಎಂಜಿನಿಯರ್ ಟಿ.ರಾಜೇಶ್, ಮುಖ್ಯೋಪಾಧ್ಯಾಯರಾದ ವೀಣಾ ಗಣೇಶ್, ಸಹ ಶಿಕ್ಷಕರಾದ ಶಿವಕುಮಾರ್, ಗ್ರಾಮದ ಮುಖಂಡರಾದ ಹನುಮಂತಪ್ಪ , ಕಾರ್ಯಕ್ರಮಾಧಿಕಾರಿ ಡಾ.ಎಸ್.ಮುಕುಂದ, ಲಕ್ಷ್ಮಣ್.ಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಶಾಲೆಯ ಆವರಣವನ್ನು ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಶಾಲೆಯೆಂದು ಘೋಷಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ…