ಶಿವಮೊಗ್ಗ: ವೃತ್ತಿಯಲ್ಲಿ ಚಿಕ್ಕ ಕೆಲಸ, ದೊಡ್ಡ ಕೆಲಸ ಎಂಬುದು ಇರುವುದಿಲ್ಲ. ನಾವು ಮಾಡುವ ಯಾವುದೇ ವೃತ್ತಿ ಆಗಿದ್ದರೂ ಗೌರವದಿಂದ ಕಾರ್ಯ ನಿರ್ವಹಿಸಬೇಕು ಎಂದು ಗೌರಿಗದ್ದೆ ವಿನಯ್ ಗುರೂಜಿ ಹೇಳಿದರು.
ಆಕಾಶ್ ಇನ್ ಗ್ರೂಪ್ ವತಿಯಿಂದ ಆಕಾಶ್ ಇನ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಡಾ. ಧನಂಜಯ ಸರ್ಜಿ ಅವರಿಗೆ ಸನ್ಮಾನಿಸಿ ಮಾತನಾಡಿದರು.

ನಾವು ಮಾಡುವ ಕೆಲಸದಲ್ಲಿಯೇ ದೇವರನ್ನು ಕಾಣಬೇಕು. ನಿಜವಾದ ದೇವರು ಕಾಣುವುದು ನಮ್ಮ ಕೆಲಸದಲ್ಲಿ, ಎಲ್ಲರೂ ಕೆಲಸವನ್ನು ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ನಿರ್ವಹಿಸಬೇಕು. ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಜೀವನ ಮುನ್ನಡೆಸಬೇಕು. ಧನಂಜಯ ಸರ್ಜಿಯವರ ಸೇವೆ ಶ್ಲಾಘನೀಯ ಎಂದು ತಿಳಿಸಿದರು.
ಆಕಾಶ್ ಇನ್ ಹೊಟೇಲ್ ಮಾಲೀಕರಾದ ಹೊಸತೋಟ ಸೂರ್ಯನಾರಾಯಣ ಅವರು ಸರ್ಜಿ ಟ್ರಸ್ಟ್ಗೆ ದೇಣಿಗೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿ, ವೈದ್ಯ ವೃತ್ತಿಯ ಜತೆಯಲ್ಲಿ ಸಮಾಜಮುಖಿ ಯಾಗಿ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಕಾರ್ಯ ಅಭಿನಂದನೀಯ. ಒಳ್ಳೆಯ ಕೆಲಸಗಳಿಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದರು.

ವೈದ್ಯ ಡಾ. ಧನಂಜಯ ಸರ್ಜಿ ಮಾತನಾಡಿ, ಎಲ್ಲರ ಸಹಕಾರದಿಂದ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದಕ್ಕೆ ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಗೌರಿಗದ್ದೆ ವಿನಯ್ ಗುರೂಜಿ ಅವರು ಸಭಿಕರ ಸಮಸ್ಯೆಗಳನ್ನು ಆಲಿಸಿ ಪ್ರತಿಕ್ರಿಯಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್, ಜಯಂತಿ, ನಮಿತಾ ಸೂರ್ಯನಾರಾಯಣ, ಬಾಬಣ್ಣ ಹಾಗೂ ಆಕಾಶ್ ಇನ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…