ಶಿವಮೊಗ್ಗ: ಹಣ ಸಂಪಾದನೆಯೇ ಮುಖ್ಯವಲ್ಲ, ಇದರ ಜೊತೆಗೆ ಮಾನವೀಯತೆ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದ್ದಾರೆ.
ಅವರು ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಡಿವಿಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜ್, ಕೌಶಲ್ಯಾಭಿವೃದ್ಧಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳದ ಸಾನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳೇ ಮಾದರಿಯಾಗಬೇಕು. ಸ್ವಂತಿಕೆ ಬೆಳೆಸಿಕೊಳ್ಳಬೇಕು. ಉದ್ಯೋಗಕ್ಕೆ ಬೇಕಾದ ಅರ್ಹತೆಗಳನ್ನು ಪಡೆಯಬೇಕು. ಉದ್ಯೋಗ ಪಡೆದ ಮೇಲೆ ಕೇವಲ ಹೊಟ್ಟೆಪಾಡು ಮುಖ್ಯವಲ್ಲ, ಇದರ ಜೊತೆಗೆ ಸಮಾಜ ಮೆಚ್ಚುವ ಕೆಲಸವಾಗಬೇಕು. ನೀವೆಲ್ಲ ಕುರಿಮಂದೆಗಳಾಗದೇ ನಿಮ್ಮತನವನ್ನು ಬೆಳೆಸಿಕೊಳ್ಳಿ ನಿಮಗೇ ನೀವೇ ಗುರು ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಇದು ಕೇವಲ ಜ್ಞಾನ ಯುಗ ಅಲ್ಲ, ಕೌಶಲ್ಯಯುಗ. ಕೌಶಲ್ಯವಿದ್ದರೆ ಉದ್ಯೋಗ ಸಿಗುವುದು ಸುಲಭವಾಗುತ್ತದೆ. ಕೇವಲ ಅಂಕಗಳ ಹಿಂದೆ ಬೆನ್ನತ್ತದೇ ಕೌಶಲ್ಯ ಬೆಳೆಸಿಕೊಳ್ಳಿ. ಪೂರೈಕೆ ಮತ್ತು ಬೇಡಿಕೆ ಉದ್ಯೋಗ ಪಡೆಯುವಲ್ಲಿ ಇದ್ದೇ ಇರುತ್ತದೆ. ವ್ಯತ್ಯಾಸಗಳು ಇರುತ್ತವೆ. ಇಂತಹ ಉದ್ಯೋಗ ಮೇಳಗಳು ಉದ್ಯೋಗ ನೀಡುವಲ್ಲಿ ಸಹಕರಿಸುತ್ತವೆ. ಉದ್ಯೋಗಾಕಾಂಕ್ಷಿಗಳು ಇದರ ಲಾಭ ಪಡೆಯಬೇಕು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್ ಮಾತನಾಡಿ, ಯುವಜನತೆ ವಿಪರ್ಯಾಸದ ಸ್ಥಿತಿಯಲ್ಲಿದ್ದಾರೆ. ಉದ್ಯೋಗಕ್ಕೆ ಬೇಕಾದ ಕೌಶಲ್ಯದ ಕೊರತೆಯಿಂದಾಗಿ ಅನೇಕ ಕಡೆ ಉದ್ಯೋಗ ಖಾಲಿ ಇದ್ದು, ಭರ್ತಿಯಾಗುತ್ತಿಲ್ಲ. ತರಬೇತಿ ಇಲ್ಲದೇ ಆಯ್ಕೆಯಾಗುವುದಿಲ್ಲ. ಅದಕ್ಕಾಗಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ತರಬೇತಿ ನೀಡುವ ಕಾರ್ಯ ಮಾಡುತ್ತಿದೆ. ನಿಮ್ಮೊಂದಿಗೆ ಸದಾ ನಾವಿದ್ದೇವೆ. ನಿಮ್ಮ ಇಷ್ಟದ ಕ್ಷೇತ್ರ ಆಯ್ದುಕೊಳ್ಳಿ. ಅದಕ್ಕೆ ತಕ್ಕನಾದ ತರಬೇತಿಯನ್ನು ನಾವು ನೀಡಲು ಸಿದ್ಧರಿದ್ದೇವೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಡಿವಿಎಸ್ ಅಧ್ಯಕ್ಷ ರುದ್ರಪ್ಪ ಕೊಳಲೆ, ಬಿ. ಗೋಪಿನಾಥ್, ವಸಂತ್ ಹೋಬಳಿದಾರ್, ಡಾ. ಧನಂಜಯ ಸರ್ಜಿ, ವಿಜಯಕುಮಾರ್, ಗಣೇಶ್ ಎಂ. ಅಂಗಡಿ ಮೊದಲಾದವರಿದ್ದರು.